ಜಿಲ್ಲೆ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕರ್ತವ್ಯ ಪಾಲಕರದು

ಹರ್ಷ ನ.ಪುರೋಹಿತ

ಮಾಯಕೊಂಡ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವುದು ಪ್ರತಿಯೊಬ್ಬ ಪಾಲಕರ ಬಹುಮುಖ್ಯ ಜವಾಬ್ದಾರಿ ಎಂದು ಮಾತೃಶ್ರೀ ಗ್ರಾಮೀಣ ಮತ್ತು ನಾಗರಾಭಿವೃದ್ಧಿ ಸಂಸ್ಥೆ ನಿರ್ದೇಶಕಿ ಪಿ. ಲಕ್ಷ್ಮಿ ಅಭಿಮತ ವ್ಯಕ್ತಪಡಿಸಿದರು.

ದಾವಣಗೆರೆ ತಾಲೂಕಿನ ಕಳವೂರು ಗ್ರಾಮದಲ್ಲಿ ಮಾತೃಶ್ರೀ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ನಿಯಂತ್ರಣ ಕುರಿತು ಅರಿವು ಮೂಡಿಸಿ ಮಾತನಾಡಿದರು.

ಬಾಲ್ಯ ವಿವಾಹದಿಂದ ಮಹಿಳಾ ಸ್ವಾತಂತ್ರೃ ಇಲ್ಲದಂತಾಗಿದೆ. ಮಹಿಳೆಯರು ದಿನೇದಿನೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಸಮಾಜದಲ್ಲಿ ಮಹಿಳೆಯರಿಗೆ ಶಿಕ್ಷಣದ ಅವಶ್ಯಕತೆ ಇದ್ದು, ಅವರಿಗೆ ಜವಾಬ್ದಾರಿ, ಪ್ರೀತಿ, ವಿನಯ, ವಿದ್ಯೆ, ಸಂಸ್ಕಾರ ಕಲಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಚಿಕ್ಕವಯಸ್ಸಿನಲ್ಲಿ ಮದುವೆ ಬೇಡ, ಬದಲಾಗಿ ಶಿಕ್ಷಣ ನೀಡಿ. ಸಮಾಜದ ರೀತಿನೀತಿಗಳ ಬಗ್ಗೆ ತಿಳಿಸಿ ಎಂದ ಅವರು, ಬಾಲ್ಯವಿವಾಹದಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರೊಂದಿಗೆ ದೈಹಿಕ, ಮಾನಸಿಕವಾಗಿ ಆರೋಗ್ಯ ಹಾಳಾಗುತ್ತದೆ ಎಂದರು.

ಅಂಗನವಾಡಿ ಶಿಕ್ಷಕಿ ಎಂ. ಅನಿತಾ ಮಾತನಾಡಿ, ಹೆಣ್ಣಾಗಲಿ, ಗಂಡಾಗಲಿ ಚಿಕ್ಕ ವಯಸ್ಸಿನಲ್ಲಿ ಮದುವೆ ಬೇಡ. ಇದರಿಂದ ಅವರಿಗೆ ಹಲವಾರು ಅನಾರೋಗ್ಯ ಕಾಡುತ್ತವೆ. ಬಾಲ್ಯ ವಿವಾಹ ಒಂದು ಪಿಡುಗು ಎಂದು ತಿಳಿಸಿದರು.

ಸಂಸ್ಥೆಯ ಪದಾಧಿಕಾರಿಗಳಾದ ಯೋಗೇಶ್, ಕುಮಾರ್, ಆಂಜನೇಯ ಶಿವಕುಮಾರ ಎನ್.ಜಿ., ಪ್ರದೀಪ್, ಆನಂದ್ ಉಪಸ್ಥಿತರಿದ್ದರು.