ಜಿಲ್ಲೆ

ಗುಡ್ಡ ಕುಸಿತದಲ್ಲಿ ಮೃತ ಮಕ್ಕಳ ಮನೆಮಂದಿಗೆ 11 ಲಕ್ಷ ರೂ.ಪರಿಹಾರ

Dakshina Kannada

ಮಂಗಳೂರು: ದ.ಕ. ಜಿಲ್ಲೆಯ ಸುಬ್ರಹ್ಮಣ್ಯದ ಕುಮಾರಧಾರ ಸಮೀಪದ ಪರ್ವತಮುಖಿಯಲ್ಲಿ ಭಾರಿ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆಯಲ್ಲಿ ಸಂತ್ರಸ್ತ ಕುಟುಂಬಕ್ಕೆ ಒಟ್ಟು 11,05,100 ರೂ.ವಿತರಿಸಲಾಗಿದೆ.

ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ತಲಾ ಐದು ಲಕ್ಷದಂತೆ 10 ಲಕ್ಷ ರೂ., ಮನೆ ದುರಸ್ತಿಗೆ 95,100 ಮತ್ತು 10 ಸಾವಿರ ಸಾವಿರ ರೂ.ವನ್ನು ಅಗತ್ಯ ವಸ್ತುಗಳು ಮತ್ತೆ ಬಟ್ಟೆಬರೆಗಳು ಹಾನಿಯಾಗಿರುವುದಕ್ಕೆ ಪರಿಹಾರವಾಗಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಭಾರಿ ಮಳೆಗೆ ಪರ್ವತಮುಖಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು, ಮಣ್ಣಿನಡಿ ಸಿಲುಕಿ ಮೂಲತಃ ಪಂಜದ ಕರಿಮಜಲು ಕುಸುಮಾಧರ ಎಂಬುವರ ಮಕ್ಕಳಾದ ಶ್ರುತಿ (11) ಮತ್ತು ಗಾನಶ್ರೀ (6) ಮೃತಪಟ್ಟಿದ್ದರು. ಸ್ಥಳೀಯರು ಜೆಸಿಬಿ ಬಳಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಅಷ್ಟರಲ್ಲೇ ಮಕ್ಕಳಿಬ್ಬರು ಮೃತಪಟ್ಟಿದ್ದರು.

ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಘಟನೆ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.