ಜಿಲ್ಲೆ

ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರಷ್ಟೇ ಪಾಲಕರು ಜವಾಬ್ದಾರರು

ಹರ್ಷ ನ.ಪುರೋಹಿತ

ಚಳ್ಳಕೆರೆ: ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶಿಕ್ಷಕರು ಮತ್ತು ಪಾಲಕರು ಸಮಾನ ಜವಾಬ್ದಾರಿಗಳನ್ನು ನಿರ್ವಹಿಸಬೇಕಿದೆ ಎಂದು ಮುಖ್ಯಶಿಕ್ಷಕ ಎ.ವೀರಣ್ಣ ಹೇಳಿದರು.

ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿ ಮಾತನಾಡಿ, ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳ ಕಲಿಕೆ ತಿಳಿದುಕೊಳ್ಳುವ ಜಾಗೃತಿ ಪಾಲಕರಲ್ಲಿರಬೇಕು. ಮನೆಯಲ್ಲಿ ಮೊಬೈಲ್, ಟಿವಿಯ ಹುಚ್ಚು ಬೆಳೆಯದಂತೆ ಎಚ್ಚರ ವಹಿಸಬೇಕು ಎಂದರು.

ಶಾಲಾ ಶಿಕ್ಷಕರ ಸಂಪರ್ಕ ಸಾಧಿಸುವ ಮೂಲಕ ಮಕ್ಕಳ ಕಲಿಕಾ ಪ್ರಮಾಣವನ್ನು ಅವಲೋಕನ ಮಾಡಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವುದಷ್ಟೇ ನಮ್ಮ ಜವಾಬ್ದಾರಿ ಎಂದುಕೊಳ್ಳಬಾರದು. ವಿದ್ಯಾರ್ಥಿ ದಿಸೆಯಲ್ಲಿ ಪರಿಶ್ರಮದಿಂದ ಓದಿಕೊಳ್ಳುವ ಮೂಲಕ ಉತ್ತಮ ಜೀವನ ಸಿಗಲಿದೆ ಎಂದು ಶಿಕ್ಷಕರು ಮತ್ತು ಪಾಲಕರು ಹೇಳಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಸದುಪಯೋಗ ಮಾಡಿಕೊಂಡು ಉದ್ಯೋಗಸ್ಥರಾಗಬೇಕು. ಕುಟುಂಬ ಮತ್ತು ಶಾಲೆಗೆ ಕೀರ್ತಿ ತರುವ ರೀತಿ ಸಾಧಕರಾಗುವ ಕನಸನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಕ ಆರ್.ಜಿ.ಶಿವಣ್ಣ ಮಾತನಾಡಿ, ಪಾಲಕರ ಸಹಕಾರದಿಂದ ಶಾಲೆಯಲ್ಲಿ ಅತಿ ಹೆಚ್ಚು ದಾಖಲಾತಿ ಇದೆ. ನಗರ ಪ್ರದೇಶವಾಗಿರುವ ಕಾರಣ, ಮಕ್ಕಳು ಮನೆಯಿಂದ ಶಾಲೆಗೆ ಬಂದುಹೋಗುವ ಬಗ್ಗೆ ಪಾಲಕರು ಎಚ್ಚರವಹಿಸಬೇಕು. ಹಬ್ಬ, ಜಾತ್ರೆಗಳ ನೆಪ ಮಾಡಿಕೊಂಡು ಮಕ್ಕಳನ್ನು ಶಾಲೆಗೆ ತಪ್ಪಿಸಬಾರದು. ಫಲಿತಾಂಶಕ್ಕೆ ಶಿಕ್ಷಕರ ಮತ್ತು ಪಾಲಕರ ಪ್ರಯತ್ನದಲ್ಲಿ ಗುರಿ ಸಾಧನೆ ಆಗಬೇಕು ಎಂದು ತಿಳಿಸಿದರು.

ಶಿಕ್ಷಕರಾದ ಪಿ.ಶಂಕರ್, ಬಿ.ರಾಜಕುಮಾರ್, ಎಂ.ಪಿ.ಪ್ರದೀಪ್, ಬಿ.ಎಲ್.ಉಮಾ, ಎಸ್.ಕೆ.ವೇಣಿ, ಜೆ.ರಾಜಮ್ಮ, ಡಿ.ಜಿ.ಕುಸುಮಾವತಿ, ಎಚ್.ಎಂ.ಪೂರ್ಣಿಮಾ, ಜೆ.ಪಿ.ಗೀತಾ ಇದ್ದರು.