ದೇವದುರ್ಗ: ಮಕ್ಕಳ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜನರ ಸಹಕಾರ ಅಗತ್ಯವಿದೆ ಎಂದು ಸಿವಿಲ್ ನ್ಯಾಯಾಧೀಶ ರಫಿಕ್ ಅಹ್ಮದ್ ಹೇಳಿದರು.
ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕತೆ ನಿರ್ಮೂಲನೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಶಿಕ್ಷಣವೇ ಅಭಿವೃದ್ಧಿಗೆ ಪ್ರಮುಖ ಅಸ್ತ್ರವಾಗಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣ ಪ್ರತಿ ಮಗುವಿನ ಹಕ್ಕಾಗಿದೆ.
14ವರ್ಷದೊಳಗಿನ ಮಕ್ಕಳ ದುಡಿಮೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ತಪ್ಪಿತಸ್ಥ ಮಾಲೀಕರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ಹಾಗೂ ತಿದ್ದುಪಡಿ ಕಾಯ್ದೆ-2016ರಡಿ ಪ್ರಕರಣ ದಾಖಲಿಸಲಾಗುವುದು. ದುಡಿಯುವ ಮಕ್ಕಳು ಕಂಡುಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ: 1098/112ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.
ವಕೀಲರ ಸಂಘದ ಅಧ್ಯಕ್ಷ ಶುಕುಮುನಿ ರೆಡ್ಡಿ, ಉಪಾಧ್ಯಕ್ಷ ವಸಂತ್ ಕುಮಾರ, ಕಾರ್ಮಿಕ ನಿರೀಕ್ಷಕ ಮಲ್ಲಪ್ಪ, ಪಿಐ ಎಸ್.ಮಂಜುನಾಥ, ಬಿಇಒ ಮಹಾದೇವಯ್ಯ, ಸಿಆರ್‌ಪಿ ಮಹಾದೇವ, ಪ್ರಮುಖರಾದ ಗಂಗಮ್ಮ ಭೀಮೋಜಿ, ಶಿವಕುಮಾರ, ಭಾಗಪ್ಪ, ಶ್ರೀದೇವಿ, ಬೋರೇಗೌಡ, ತಿಕ್ಕಯ್ಯ, ಹುಸೇನ್ ನಾಯ್ಕ ಇತರರಿದ್ದರು.