ಸಿಂಧನೂರು: ಪಾಲಕರನ್ನು ಗೌರವದಿಂದ ಕಾಣುವ ಮಕ್ಕಳ ಜೀವನ ಉಜ್ವಲಗೊಳ್ಳುತ್ತದೆ. ಈ ದಾರಿಯಲ್ಲಿ ವಿದ್ಯಾರ್ಥಿಗಳು ಸಾಗಬೇಕು ಎಂದು ಸಾಹಿತಿ ಮತ್ತು ಉಪನ್ಯಾಸಕ ರಮೇಶಬಾಬು ಯಾಳಗಿ ಹೇಳಿದರು.
ನಗರದ ಸತ್ಯಾಗಾರ್ಡನ್‌ನಲ್ಲಿ ವಿ.ಸಿ.ಬಿ. ಪದವಿ ಪೂರ್ವ ಕಾಲೇಜ್, ನ್ಯಾಷನಲ್ ಪದವಿ ಮಹಾವಿದ್ಯಾಲಯದಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಚೆನ್ನಾಗಿ ಓದಿ, ಉನ್ನತ ಸಾಧನೆ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳುತ್ತಾರೆಂದು ಪಾಲಕರು ಕಷ್ಟಗಳನ್ನು ಮರೆಮಾಚಿ ಓದಿಸುತ್ತಾರೆ. ಅವರ ನಂಬಿಕೆಯನ್ನು ವಿದ್ಯಾರ್ಥಿಗಳು ಹುಸಿಗೊಳಿಸದೆ, ಹೆತ್ತವರ ಆಶೋತ್ತರ ಈಡೇರಿಸುವ ಕೆಲಸ ಮಾಡಬೇಕು ಎಂದರು.
ಡಿವೈಎಸ್ಪಿ ಬಿ.ಎಸ್.ತಳವಾರ ಮಾತನಾಡಿ, ವಯಸ್ಸಿಗೆ ಅನುಗುಣವಾಗಿ ಹತ್ತಾರು ಆಲೋಚನೆಗಳು ಬರುತ್ತವೆ. ಆದರೆ ಮನಸ್ಸನ್ನು ನಿಯಂತ್ರಿಸಬೇಕು. ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ, ಸದಾ ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ತಳೆಯಬೇಕು. ನನ್ನ ಈ ಸಾಧನೆಗೆ ಓದಿನ ಸಮಯದಲ್ಲಿ ದೊರೆತ ಉತ್ತಮ ಗೆಳೆಯರ ಸಹವಾಸವೇ ಕಾರಣ ಎಂದರು.
ಬಳಗಾನೂರು ಠಾಣೆ ಪಿಎಸ್‌ಐ ಎರಿಯಪ್ಪ ಅಂಗಡಿ ,ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ್, ಅಲಬನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಎಸ್.ಶಿವರಾಜ ಮಾತನಾಡಿದರು. ಪ್ರಾಚಾರ್ಯ ರಾಮಲಿಂಗಯ್ಯ ಪ್ರಾಸ್ತಾವಿಕ ಮಾತನಾಡಿದರು.