ಜಿಲ್ಲೆ

ಶಿರಾ ಕ್ಷೇತ್ರದಲ್ಲಿ ಮಕ್ಕಳ ಸೈನ್ಯ

ರಮೇಶ್​ ಕುಮಾರ್​​ ಬಿ ಎಡಮೋಳೆ

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು

ಶಿರಾ ಸಮರಾಂಗಣದಲ್ಲಿ ಮೂರು ಪಕ್ಷಗಳ ಪ್ರಮುಖ ಸೇನಾನಿಗಳ ಪುತ್ರರೇ ರಾಜಕೀಯ ‘ಚಕ್ರವ್ಯೂಹ’ದೊಳಕ್ಕೆ ಶಸ್ತ್ರ ಸಜ್ಜಿತರಾಗಿ ನುಗ್ಗಿದ್ದು, ಯಾರು ವ್ಯೂಹ ಭೇದಿಸುತ್ತಾರೆಂಬ ಕುತೂಹಲ ಮೂಡಿದೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪುತ್ರರಾದ ಸಂತೋಷ್ ಹಾಗೂ ಸಂದೀಪ್ ಚುನಾವಣೆಯ ಸಂಪೂರ್ಣ ಉಸ್ತುವಾರಿ ಹೊತ್ತುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪುತ್ರ ಸತ್ಯಪ್ರಕಾಶ್ ಹೆಗಲಿಗೆ ಅಮ್ಮನನ್ನು ಗೆಲ್ಲಿಸಿಕೊಂಡು ಬರಬೇಕಾದ ದೊಡ್ಡ ಜವಾಬ್ದಾರಿ ಬಿದ್ದಿದೆ. ಬಿಜೆಪಿ ಅಭ್ಯರ್ಥಿ ರಾಜೇಶ್​ಗೌಡ ತಂದೆ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಪುತ್ರನ ಪರ ಮತಬೇಟೆಯಲ್ಲಿ ತೊಡಗಿರುವುದು ಚುನಾವಣಾ ಕಾವು ಏರಿಸಿದೆ.

ವಿಜಯೇಂದ್ರ, ಪ್ರಜ್ವಲ್: ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹೆಗಲಿಗೆ ಶಿರಾ ಸಮರದ ಉಸ್ತುವಾರಿ ವಹಿಸಲಾಗಿದೆ. ಬೆಳ್ಳಾವಿಯ ಹಿತೈಷಿಗಳ ಮನೆಯಲ್ಲಿ ವಾಸ್ತವ್ಯ ಹೂಡಿರುವ ವಿಜಯೇಂದ್ರ, ಸದ್ಯಕ್ಕೆ ಆ ಮನೆಯನ್ನೇ ‘ವಾರ್​ರೂಂ’ ಮಾಡಿಕೊಂಡಿದ್ದಾರೆ. ಎಚ್.ಡಿ. ದೇವೇಗೌಡರು ಮತ್ತೊಬ್ಬ ಮಗ ಎಚ್.ಡಿ. ರೇವಣ್ಣರಿಗೆ ಕ್ಷೇತ್ರದ ಸಂಪೂರ್ಣ ಹೊಣೆ ನೀಡಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಸಹ ಕ್ಷೇತ್ರದಲ್ಲೇ ಠಿಕಾಣಿ ಹೂಡಲಿದ್ದಾರೆ.

ರಾಜೇಂದ್ರ ಕಟ್ಟಿಹಾಕಲು ಯತ್ನ?

ಜಯಚಂದ್ರ-ಕೆ.ಎನ್. ರಾಜಣ್ಣ ಒಗ್ಗೂಡಲು ಭೂಮಿಕೆ ಸಿದ್ಧಪಡಿಸಿದ್ದ ರಾಜಣ್ಣ ಪುತ್ರ, ಆರ್.ರಾಜೇಂದ್ರ ಶಿರಾದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸುತ್ತುತ್ತಿದ್ದಾರೆ. ಪ್ರಮುಖ ಜಾತಿಗಳ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿರುವುದು ವಿರೋಧಿ ಪಾಳಯದ ಕಣ್ಣುಕುಕ್ಕಿದೆ.

ಮಿತ್ರನ ವಿರುದ್ಧ ಯತೀಂದ್ರ!

ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆಪ್ತಮಿತ್ರನ ವಿರುದ್ಧ ಪ್ರಚಾರ ನಡೆಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಡಯೋಗ್ನಾಸ್ಟಿಕ್ ಸೆಂಟರ್ ಹೊಂದಿರುವ ರಾಜೇಶ್​ಗೌಡ ಜತೆ ಯತೀಂದ್ರ ವ್ಯಾವಹಾರಿಕ ಪಾಲುದಾರರಾಗಿದ್ದರು. ಈಗ ರಾಜಕೀಯ ಎದುರಾಳಿಗಳಾಗಿದ್ದಾರೆ.