ಚೆರಿಯಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಕೊಠಡಿಯನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಪಿ.ಯು. ಸಾದಲಿ, ವನಜಾಕ್ಷಿ ರೇಣುಕೇಶ್, ಕುಲೇಟಿರ ಹೇಮಾವತಿ ಅರುಣ್ ಇತರರು ಇದ್ದರು. 
ಜಿಲ್ಲೆ

ಮಕ್ಕಳೇ ದೇಶದ ಭವಿಷ್ಯ

ನಾಪೋಕ್ಲು: ಇಂದಿನ ಮಕ್ಕಳೇ ದೇಶದ ಭವಿಷ್ಯ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ಸಮೀಪದ ಚೆರಿಯಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನೂತನ ಶಾಲಾ ಕೊಠಡಿ ಮತ್ತು ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳೇ ನಮ್ಮ ದೇಶದ ಭವಿಷ್ಯ. ಆದರೆ ಮಕ್ಕಳ ಭವಿಷ್ಯವನ್ನು ರೂಪಿಸುವಂತಹ ಜವಾಬ್ದಾರಿ, ಪಾಲಕರು, ಜನಪ್ರತಿನಿಧಿಗಳು, ಶಿಕ್ಷಕರದ್ದಾಗಿದೆ. ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ ಆಗಿದೆ ಎಂದು ಹೇಳಿದರು.

ಶಾಲೆಯ ಆಡಳಿತ ಮಂಡಳಿ ಮತ್ತು ಸ್ಥಳೀಯರು ಸೇರಿ ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಿದ್ದು, ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇದರ ಸದ್ಭಳಕೆ ಆಗಬೇಕು. ಮಕ್ಕಳು ಹೆಚ್ಚು ಓದಲು ಸ್ಫೂರ್ತಿ ನೀಡಬೇಕು. ಯಾವ ರೀತಿಯ ಶಿಕ್ಷಣ ಪಡೆದರೆ, ಯಾವ ರೀತಿ ಉಪಯೋಗವಾಗುತ್ತದೆ ಎಂಬ ಬಗ್ಗೆ ಪೂರಕವಾದ ಮಾಹಿತಿಯನ್ನು ನೀಡಬೇಕು. ಶಾಲೆಗೆ ಹೋಗುವ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದವರು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಸ್ನೇಹಿತರು ಮತ್ತು ಆಟದಷ್ಟೇ ಪಾಠವೂ ಅತ್ಯವಶ್ಯಕ. ಒಳ್ಳೆಯ ಶಿಕ್ಷಣ ಪಡೆದು ಸಾರ್ಥಕವಾದ ಜೀವನ ನಡೆಸಿ. ಪಾಲಕರು ಮಕ್ಕಳಿಗೆ ಸ್ವತಂತ್ರವಾಗಿ ಚಿಂತನೆ ಮಾಡುವ ಶಕ್ತಿಯನ್ನು ತುಂಬಬೇಕು. ಸ್ವತಂತ್ರವಾಗಿ ಜೀವಿಸುವ ಮಾರ್ಗವನ್ನು ಅಳವಡಿಸಿಕೊಟ್ಟರೆ ಅವರೇ ಜೀವನ ನಡೆಸಿಕೊಂಡು ಹೋಗುತ್ತಾರೆ ಎಂದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ಯು. ಸಾದಲಿ, ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷ ಕುಲೇಟಿರ ಹೇಮಾವತಿ ಅರುಣ್, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಕೆ.ಎ., ಸದಸ್ಯ ಮಾಚೇಟಿರ ಕುಶು ಕುಶಾಲಪ್ಪ, ಚೆರಿಯಪರಂಬು ಜಮಾತ್ ಅಧ್ಯಕ್ಷ ಜುಬೇರ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ದೊಡ್ಡೇಗೌಡ, ಮಡಿಕೇರಿ ಕ್ಷೇತ್ರ ಸಮನ್ವಯಾಧಿಕಾರಿ ಪಿ.ಕೆ.ಗುರುರಾಜ್, ಹಳೆ ವಿದ್ಯಾರ್ಥಿ ಸಿರಾಜ್, ಮಂಜುನಾಥ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುಳಾ ಚಿತ್ರಾಪುರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪ ಪ್ರಾಂಶುಪಾಲ ಶಿವಣ್ಣ ಎಂ.ಎಸ್., ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ಎಂ.ಬಿ., ಗುತ್ತಿಗೆದಾರ ಬಾಬು ಕೆ. ಇತರರು ಇದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಶಾಲೆಯ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.