ಬೆಂಗಳೂರು ಗ್ರಾಮಾಂತರ : ಹೊಸಕೋಟೆ ತಾಲೂಕು ನಂದಗುಡಿ ಹೋಬಳಿ ನೆಲವಾಗಿಲು ಪಂಚಾಯಿತಿ ವ್ಯಾಪ್ತಿಯ ಎತ್ತಿನೊಡೆಯನಪುರ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಹೋದವರು ಇದುವರೆಗೆ ಇತ್ತ ಕಡೆ ಸುಳಿದಿಲ್ಲ. 2026 ಏಪ್ರಿಲ್ನಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿದ್ದವರು ಕಾಮಗಾರಿಯನ್ನೇ ಆರಂಭಿಸಿಲ್ಲ.
ಹೌದು! ಕಳೆದೆರಡು ವರ್ಷದಿಂದ ಶಾಲಾ ಕಟ್ಟಡವಿಲ್ಲದೆ ಪರದಾಡುತ್ತಿರುವ ಇಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಹೊಸ ಕಟ್ಟಡ ನಿರ್ಮಾಣದ ಭರವಸೆ ದೊರೆತಿತ್ತು. ಕಳೆದ 6 ತಿಂಗಳ ಹಿಂದೆ ನೂತನ ಕಟ್ಟಡ ಕಾಮಗಾರಿ ಆರಂಭಿಸಲು 13.90 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಕಟ್ಟಡ ಸೇವೆ ಸಿದ್ಧವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ ಏಪ್ರಿಲ್ ಸಮೀಪಿಸುತ್ತಿದ್ದರೂ ಕಾಮಗಾರಿಯೇ ಆರಂಭವಾಗದಿರುವುದು ಮಕ್ಕಳ ಪಾಲಕರನ್ನು ಭ್ರಮರನಿರಸನಗೊಳಿಸಿದೆ.
ಬೀಗ ಹಾಕುವ ನಿರ್ಧಾರ: ಈ ಹಿಂದೆ ಇದ್ದ ಶಿಥಿಲಗೊಂಡಿದ್ದ ಶಾಲಾ ಕಟ್ಟಡ ಕೆಡವಲಾಗಿದೆ, ತಾತ್ಕಾಲಿಕವಾಗಿ ಮಕ್ಕಳನ್ನು ಇಲ್ಲಿನ ಅಂಗವನಾಡಿ ಕೇಂದ್ರದಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗಿದೆ, ಇಂದು&ನಾಳೆ ಎಂದು ಕಾಯುತ್ತಿರುವ ವಿದ್ಯಾರ್ಥಿಗಳ ಪಾಲಕರು ಹೊಸ ಕಟ್ಟಡದ ಕಾಮಗಾರಿ ಆರಂಭವೇ ಆಗದಿರುವುದಕ್ಕೆ ತೀವ್ರ ಬೇಸರಗೊಂಡಿದ್ದಾರೆ. ಹೊಸ ಕಟ್ಟಡ ಕಾಮಗಾರಿ ಆರಂಭವಾಗುವವರೆಗೆ ತಾತ್ಕಾಲಿಕ ಶಾಲೆಗೆ ಬೀಗ ಹಾಕುವ ನಿರ್ಧಾರ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ವಿವೇಕ ಬದಲಾವಣೆ :ವಿವೇಕಾ ಯೋಜನೆಯಡಿ ಮಂಜೂರಾಗಿರುವ ತರಗತಿಗಳನ್ನು ವರ್ಗಾಯಿಸಿಕೊಡುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ ವತಿಯಿಂದ ಡಿ.ಶೆಟ್ಟಿಹಳ್ಳಿಗೆ ಬದಲಾಗಿ ಎತ್ತಿನೊಡೆಯನಪುರ ಗ್ರಾಮಕ್ಕೆ ವಿವೇಕ ತರಗತಿ ಕಟ್ಟಡ ಕಾಮಗಾರಿ ವರ್ಗಾಯಿಸಿತ್ತು. ಕಳೆದೆರಡು ವರ್ಷದಿಂದ ಇಲ್ಲಿನ ವಿದ್ಯಾರ್ಥಿಗಳು ಬಯಲಿನಲ್ಲಿಯೇ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿತ್ತು. 2 ವರ್ಷದ ಹಿಂದೆ ಶಿಥಿಲಗೊಂಡಿದ್ದ ಕಟ್ಟಡದಿಂದಾಗಿ ಅಪಾಯಕ್ಕೆ ಹೆದರಿ ತಾತ್ಕಾಲಿಕವಾಗಿ ಹೊರಗಡೆ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದ್ದರು, ನಂತರದಲ್ಲಿ ಅಂಗನವಾಡಿ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸಲಾಗಿತ್ತು.
ಎಲ್ಲದರಿಂದಲೂ ಮಕ್ಕಳು ದೂರ : ಪ್ರಸ್ತುತ 1ರಿಂದ 5ನೇ ತರಗತಿವರೆಗೆ 14 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಪ್ರಾಥಮಿಕ ಶಾಲೆ ಮಕ್ಕಳಿಗೆ ಯಾವುದೇ ದೈಹಿಕ ಚಟುವಟಿಕೆಯಿಲ್ಲ, ಆಟ, ಕ್ರೀಡೆ, ಪ್ರತಿಭಾಕಾರಂಜಿ ಸೇರಿ ಸರ್ಕಾರದ ಯಾವುದೇ ಚಟುವಟಿಕೆಗಳೂ ಇಲ್ಲದಂತಾಗಿವೆ, ನೂತನ ಕಟ್ಟಡ ನಿರ್ಮಾಣ ಬಳಿಕವಾದರೂ ಇವೆಲ್ಲ ಸೌಲಭ್ಯಗಳು ಮಕ್ಕಳಿಗೆ ಲಭಿಸಲಿವೆ ಎಂಬ ನಿರೀೆ ಇತ್ತು. ಆದರೆ ಕಟ್ಟಡವೇ ನಿರ್ಮಾಣವಾಗದೆ ಇವೆಲ್ಲ ಸೌಲಭ್ಯಗಳು ಸಿಗುವುದಾದರು ಹೇಗೆ ಎಂಬುದು ಪಾಲಕರ ಪ್ರಶ್ನೆಯಾಗಿದೆ.
ವರದಿ ಬಳಿಕ ಎಚ್ಚೆತ್ತಿದ್ದ ಆಡಳಿತ : ಶಾಲಾ ಕಟ್ಟಡವಿಲ್ಲದೆ ಮಕ್ಕಳು ಬಯಲಿನಲ್ಲಿ ಕುಳಿತು ಪಾಠ ಕೇಳುತ್ತಿದ್ದ ದೃಶ್ಯವನ್ನು ಚಿತ್ರ ಸಮೇತ ವಿಜಯವಾಣಿ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ತಾಲೂಕು ಅಡಳಿತ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರ ಮಾಡಿತ್ತು. ನಂತರ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಎತ್ತಿನೊಡೆಯನಪುರಕ್ಕೆ ಸರ್ಕಾರಿ ಶಾಲೆ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.
ಈ ಹಿಂದೆ ಕೆಲವರು ತರಾತುರಿಯಲ್ಲಿ ಶಾಲೆಯ ನಿವೇಶನದಲ್ಲಿ ಗುದ್ದಲಿಪೂಜೆ ನೆರವೇರಿಸಿ ಹೋದರು. ಅದಾಗಿ ಇದುವರೆಗೆ ಇತ್ತ ಕಡೆ ಯಾರೂ ಸುಳಿದಿಲ್ಲ, ಕಟ್ಟಡ ಸಾಮಾಗ್ರಿಗಳು ಬಂದಿಲ್ಲ. ಪರಿಸ್ಥಿತಿ ನೋಡಿದರೆ ಸದ್ಯಕ್ಕೆ ಇಲ್ಲಿನ ಮಕ್ಕಳಿಗೆ ಹೊಸ ಕಟ್ಟಡದ ಭಾಗ್ಯವಿಲ್ಲ ಎನಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕು. | ಜಗದೀಶ್ ಸ್ಥಳಿಯ ಎರಡು ವರ್ಷದಿಂದ ಎತ್ತಿನೋಡೆಯಪುರ ಗ್ರಾಮದಲ್ಲಿ ಶಾಲೆಯ ಕಟ್ಟಡ ಮಾಡಿಕೊಡುವುದಾಗಿ ಸಚಿವರು, ಶಾಸಕರು ಭರವಸೆ ನೀಡುತ್ತಲೇ ಬಂದಿದ್ದಾರೆ, ಆದರೆ ಇಲ್ಲಿಯವರೆಗೆ ಕಾಮಗಾರಿ ಆರಂಭಿಸುವ ಲಕ್ಷಣವೇ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗೆ ಸಂಪೂರ್ಣ ರಜೆ ಘೋಷಿಸಿ ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಇದಾದ ಬಳಿಕವಾದರೂ ಸಂಬಂಧಪಟ್ಟವರು ಸ್ಪಂದಿಸುತ್ತಾರ ಕಾದುನೋಡಬೇಕಿದೆ. | ಮೋಹನ್ ಎಸ್ಡಿಎಂಸಿ ಸದಸ್ಯ