ಜಿಲ್ಲೆ

ಮಕ್ಕಳು ದೇವರು ಕೊಟ್ಟ ವರವಿದ್ದಂತೆ

ಬಸವರಾಜ ವೀರಪ್ಪ ಗರಗ

ನರಗುಂದ: ಪಟ್ಟಣದ ಸರ್.ಎಂ. ವಿಶ್ವೇಶ್ವರಯ್ಯ ಸಿಬಿಎಸ್​ಇ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಬುಧವಾರ ಸಡಗರದಿಂದ ಆಚರಿಸಲಾಯಿತು.

ಶಾಲೆಯ ಎಲ್​ಕೆಜಿ, ಯುಕೆಜಿ ತರಗತಿ ಮಕ್ಕಳು ಕೃಷ್ಣ ಹಾಗೂ ರಾಧೆಯರ ವೇಷ ಧರಿಸಿ ಮಿಂಚಿದರು. ಮಕ್ಕಳ ತಾಯಂದಿರಿಗೆ ಯಶೋಧೆಯ ವೇಷಭೂಷಣದ ಸ್ಪರ್ಧೆ ಏರ್ಪಡಿಸಲಾಗಿತ್ತು. ಕೃಷ್ಣ ವೇಷಧಾರಿ ಮಗುವಿನ ಕಣ್ಣಿಗೆ ಬಟ್ಟೆ ಕಟ್ಟಿ ಆ ಮಗುವಿನ ತಾಯಿ ಮತ್ತು ಮಗುವಿನ ಮಧ್ಯದಲ್ಲಿ ಇರಿಸಿದ್ದ ಬೆಣ್ಣೆ ಕುಡಿಕೆಗಳನ್ನು ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸಂಸ್ಥೆಯ ಕಾರ್ಯದರ್ಶಿ ಮಹೇಶ ಪಾಟೀಲ ಮಾತನಾಡಿ, ಮಕ್ಕಳನ್ನು ಶ್ರೀಕೃಷ್ಣನ ವೇಷದಲ್ಲಿ ನೋಡಿದರೆ ಸಾಕ್ಷಾತ್ ಭಗವಂತನನ್ನೇ ನೋಡಿದಂತಾಗಿ ಮನಸಿನಲ್ಲಿ ಭಕ್ತಿಭಾವ ಮೂಡುತ್ತದೆ ಎಂದರು.

ಪ್ರಾಚಾರ್ಯ ಸತೀಶಚಂದ್ರ ಎಚ್.ವಿ. ಮಾತನಾಡಿ, ಮಕ್ಕಳು ದೇವರು ಕೊಟ್ಟ ವರವಿದ್ದಂತೆ. ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

7 ರಿಂದ 10ನೇ ತರಗತಿ ಗಂಡು ಮಕ್ಕಳಿಗೆ ಪಿರಾಮಿಡ್ ರಚಿಸಿ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಗಂಗಮ್ಮ ಶೀಲವಂತರ, ಶ್ವೇತಾ ಹೀರೆಮಠ, ಇತರರು ಉಪಸ್ಥಿತರಿದ್ದರು.