ಯೋಗ-ಧ್ಯಾನ ಮತ್ತು ಸಂಸ್ಕಾರಗಳ ಮೂಲಕ ಪ್ರತಿಯೊಬ್ಬರೂ ಸದೃಢರಾಗಬೇಕು. ಆ ಮೂಲಕ ಮೊಬೈಲ್ ಸಂಸ್ಕೃತಿಗೆ ಸಿಲುಕಿರುವ ಮಕ್ಕಳನ್ನು ನಾಳಿನ ಪ್ರಜೆಗಳಾಗಿ ರೂಪಿಸುವಲ್ಲಿ ಯಶಸ್ವಿಯಾದರೆ ಭವಿಷ್ಯದ ದಿನಗಳು ಸಾರ್ಥಕವಾಗುತ್ತವೆ ಎಂದು ಅಜ್ಜೀಪುರ ಮಠದ ಶ್ರೀ ನಂದೀಶ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೊಸಮಠ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶತಾಯುಷಿ ‘ಎಂ.ಬಿ.ವೀರಭದ್ರಪ್ಪ ಅವರ ಶತವರ್ಷ ಸಂಭ್ರಮ’ ಕಾರ್ಯಕ್ರಮದಲ್ಲಿ ಆಶೀರ್ವದಿಸಿ ಮಾತನಾಡಿದರು. ಬದುಕುವುದಷ್ಟೇ ಮುಖ್ಯವಲ್ಲ, ಬದುಕಿನೊಟ್ಟಿಗೆ ಮಾನವೀಯ ಸಂಬಂಧಗಳನ್ನು ಬೆಸೆಯುವ ಕಾರ್ಯಗಳಾಗಬೇಕು. ತಮ್ಮ ಓದು - ಬರಹ - ಸಮಾಜ ಚಿಂತನೆಯಿಂದ ನೂರು ವಸಂತಗಳನ್ನು ಪೂರೈಸಿರುವ ಎಂ.ಬಿ. ವೀರಭದ್ರಪ್ಪ ಅವರು ನಮಗೆ ಆದರ್ಶವಾಗಿದ್ದಾರೆ. ಅವರ ಮಾನವೀಯ ಬದುಕನ್ನು ನಾವು ಅನುಸರಿಸಬೇಕು ಎಂದು ಕರೆ ನೀಡಿದರು.
ಹೊಸ ಮಠದ ಪೀಠಾಧಿಪತಿ ಶ್ರೀ ಚಿದಾನಂದ ಸ್ವಾಮೀಜಿ ಮಾತನಾಡಿ, ವೀರಭದ್ರಪ್ಪ ಅವರು ಕಂದಾಯ ಇಲಾಖೆ, ಪೊಲೀಸ್ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದರಲ್ಲದೆ ಸರ್ಕಾರಿ ಶಿಕ್ಷಕ ತರಬೇತಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅಪಾರ ಶಿಷ್ಯವರ್ಗವನ್ನು ಹೊಂದಿದ್ದ ಅವರು ನುಡಿದಂತೆ ನಡೆದು ನೂರು ವರ್ಷಗಳ ಸಾರ್ಥಕ್ಯ ಜೀವನವನ್ನು ಅನುಭವಿಸಿದ್ದಾರೆ. ಅವರ ಮಾರ್ಗದರ್ಶನ ಸಮಾಜಕ್ಕೆ ಅನಿವಾರ್ಯ ಎಂಬ ಅನಿಸಿಕೆಯನ್ನು ಹಂಚಿಕೊಂಡರು.
ಯೋಗ ಶಿಕ್ಷಕ ಅಮೃತಯೋಗಿ, ಕಾವೇರಿ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ ನಾಗಭೂಷಣ್, ಅಂಬಿಕಾ ಪ್ರಭುಶಂಕರ್, ಕಸಾಪ ಸರಗೂರು ಘಟಕದ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಪ್ರೊ. ಕುಮಾರಸ್ವಾಮಿ, ಸಾಹಿತಿ ಪೂರಿಗಾಲಿ ಮರಡೇಶಮೂರ್ತಿ, ಹನೂರು ತಾ.ಪಂ. ಅಧ್ಯಕ್ಷ ಮುರುಡೇಶ್ ಅಜ್ಜೀಪುರ, ಮಂಜುನಾಥ್ ಮತ್ತಿತರರು ತಮ್ಮ ಅನಿಸಿಕೆ ಹಂಚಿಕೊಂಡರು.
ಶರಣ ಮಂಡಳಿ ಸದಸ್ಯ ಪ್ರಭುಸ್ವಾಮಿ, ನೀಲಾಂಬಿಕ, ಗುರು ಸ್ವೀಟ್ಸ್‌ನ ಮಹದೇವಮ್ಮ ಅವರು ವಚನಗಾಯನ ನಡೆಸಿದರು. ಎಂ.ಬಿ. ವೀರಭದ್ರಪ್ಪವರ ಪುತ್ರ ಎಂ.ವಿ. ನಾಗೇಶ್, ಎಂ.ಮಂಜುನಾಥ್, ರಾಜೇಂದ್ರಪ್ಪ, ಶಿವಪ್ಪ, ತುಮಕೂರಿನ ಶಂಕರಪ್ಪ, ಬೆಂಗಳೂರಿನ ಬಸವರಾಜ್, ಮಂಜೇಶ್ ಕುಮಾರ್, ಮಹೇಶ್ ಕುಮಾರ್, ಎಲ್‌ಐಸಿ ನಂಜುಂಡಸ್ವಾಮಿ, ನಗರ್ಲೆ ಶಿವಕುಮಾರ್, ವಿಕ್ರಾಂತ್ ನಂಜುಂಡಸ್ವಾಮಿ, ಚಳ್ಳಕೆರೆ ಶೇಖರ್, ಅಗ್ರಹಾರದ ಎಂ.ಎಸ್. ರುದ್ರಸ್ವಾಮಿ ಇತರರುದ್ದರು.