ಮೈಸೂರು: ಬಾಲ್ಯ ತುಂಬಾ ಅಮೂಲ್ಯ. ಅದು ನೀಡುವ ಅನುಭವ ದೊಡ್ಡದು. ಅದನ್ನು ಕಟ್ಟಿಕೊಡುವ ಕಾರ್ಯವನ್ನು ಇಂತಹ ಚಿಣ್ಣರ ಮೇಳ ಮಾಡಬೇಕು ಎಂದು ಚಿತ್ರ ನಿರ್ದೇಶಕ ಶಶಾಂಕ್ ಸೊಗಹಲ್ ಹೇಳಿದರು.
ರಂಗಾಯಣದಿಂದ ಆಯೋಜಿಸಿದ್ದ ಚಿಣ್ಣರ ಮೇಳದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿ, ಚಿಣ್ಣರ ಮೇಳದಲ್ಲಿ ಮಕ್ಕಳು ಹಲವು ಬಗೆಯ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ನಾನು ಕೂಡ ಚಿಣ್ಣರ ಮೇಳದಲ್ಲಿ ಭಾಗವಹಿಸಿದ್ದೆ. ಆ ಮೂಲಕ ಹಲವು ಅನುಭವ ಪಡೆದುಕೊಂಡಿದ್ದೆ. ನನ್ನ ಬಾಲ್ಯದ ಒಂದು ಭಾಗ ಈ ಮೇಳದಲ್ಲಿ ಇತ್ತು ಎಂದರೆ ತಪ್ಪಲ್ಲ ಎಂದರು.
ದೀನಬಂಧು ಟ್ರಸ್ಟ್ ಸಂಸ್ಥಾಪಕ ಜಿ.ಎಸ್. ಜಯದೇವ ಮಾತನಾಡಿ, ಮಕ್ಕಳು ಈ ಮೇಳದಿಂದ ಪರಸ್ಪರ ಗೌರವ ಭಾವನೆ, ಭ್ರಾತೃತ್ವ, ಏಕತೆಯನ್ನು ಕಲಿತರು. ಶಾಲೆಯಲ್ಲಿ ಸಾಧ್ಯವಿಲ್ಲದ್ದನ್ನು ಇಲ್ಲಿ ಕಲಿಯಬಹುದು. ಸಹಾನುಭೂತಿ, ಪ್ರೀತಿ-ವಿಶ್ವಾಸ ಅರಿತುಕೊಂಡಿದ್ದಾರೆ. ಅಂಕಗಿಂತ ಬದುಕುವುದನ್ನು ಕಲಿಯಬೇಕು ಎಂದು ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ. ಧರಣೀದೇವಿ ಮಾಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಚಿಣ್ಣರ ಮೇಳದ ಸಂಚಾಲಕಿ ಗೀತಾ ಮೋಂಟಡ್ಕ ಇತರರು ಇದ್ದರು.