ಚಿತ್ರದುರ್ಗ: ಲಾಸಿಕಾ ಫೌಂಡೇಶನ್, ಬೆಂಗಳೂರಿನ ನಾಟ್ಯಾಂತರಂಗದಿಂದ ಕೋಟೆನಗರಿಯ ತರಾಸು ರಂಗಮಂದಿರದಲ್ಲಿ ಜೂ.11ರ ಸಂಜೆ 4.30ಕ್ಕೆ ಬಾಲಪ್ರತಿಭೆ ಶಮಾ ಭಾಗ್ವತ್ ಭರತನಾಟ್ಯ ರಂಗಪ್ರವೇಶ ಹಮ್ಮಿಕೊಳ್ಳಲಾಗಿದೆ.
ಫೌಂಡೇಶನ್‌ನ ವಿದುಷಿ ಶ್ವೇತಾ ಮಂಜುನಾಥ್ ಅವರ ಪುತ್ರಿ, ಶಿಷ್ಯೆಯೂ ಆಗಿರುವ ಶಮಾ ಚಿಕ್ಕ ವಯಸ್ಸಿನಲ್ಲೇ ರಂಗಪ್ರವೇಶ ಮಾಡುತ್ತಿದ್ದಾಳೆ.
ಶಮಾ ಅಂದು 2.30 ತಾಸು ಭರತನಾಟ್ಯದ ಮೂಲಕ ಸಭಿಕರನ್ನು ಸೆರೆಹಿಡಿಯಲು ಉತ್ಸುಕಳಾಗಿದ್ದಾಳೆ.
13ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡುತ್ತಿರುವ ಮೊದಲ ಕಲಾಚಿಲುಮೆ ಎಂದು ಫೌಂಡೇಶನ್‌ನ ಕಾರ್ಯದರ್ಶಿ ಮಂಜುನಾಥ್ ಭಾಗ್ವತ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ರಂಗಪ್ರವೇಶದಲ್ಲಿ ಪುಷ್ಪಾಂಜಲಿ, ಅಲರಿಪು, ಜತಿಸ್ವರ, ಮಣ್ಣಿನ ಮಡಿಕೆ ಮೇಲೆ ನಾಟ್ಯ ಮಾಡುವ ಪೆರಿಣಿ, ವರ್ಣ, ಶಿವಸ್ತುತಿ, ದೇವರನಾಮ, ತಿಲ್ಲಾನ ಹೀಗೆ ಹಲವು ಆಯಾಮಗಳಲ್ಲಿ ಪ್ರದರ್ಶನ ನೀಡಲಿದ್ದಾಳೆ.
4 ವರ್ಷದವಳಿದ್ದಾಗಿಂದಲೂ ಭರತನಾಟ್ಯದಲ್ಲಿ ಶಮಾಗೆ ಹೆಚ್ಚು ಒಲವಿದೆ. ಸತತ 8 ವರ್ಷದಿಂದಲೂ ಅಭ್ಯಾಸ ನಿರತಳಾಗಿದ್ದಾಳೆ.
ರಂಗಪ್ರವೇಶಕ್ಕಾಗಿ ಬೆಂಗಳೂರಿನಲ್ಲಿ 2 ತಿಂಗಳು ವಿಶೇಷ ತರಬೇತಿ ಕೂಡ ಪಡೆದಿದ್ದಾಳೆ. ಅನೇಕ ತಂಡದೊಂದಿಗೆ ನೂರಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದಾಳೆ. ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ ಎಂದು ವಿವರಿಸಿದರು.
ವಿದುಷಿ ಶ್ವೇತಾ ಮಾತನಾಡಿ, ಇದೇ ವೇಳೆ ಸಭಾ ಸಂಭ್ರಮ ಮತ್ತು ಗುರುವಂದನೆ ಆಯೋಜಿಸಲಾಗಿದ್ದು, ಬೆಂಗಳೂರಿನ ನಾಟ್ಯಾಂತರಂಗ ನಿರ್ದೇಶಕಿ ಶುಭಾ ಧನಂಜಯ ಗುರುವಂದನೆ ಸ್ವೀಕರಿಸಲಿದ್ದಾರೆ.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಎನ್.ಚಲವಾದಿ, ಸೆಲ್ಕೋ ಇಂಡಿಯಾ ಸಿಇಒ ಮೋಹನ ಭಾಸ್ಕರ ಹೆಗಡೆ, ಹಿರಿಯ ಪತ್ರಕರ್ತ ರವೀಂದ್ರಭಟ್, ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ವಿಜಯಕುಮಾರ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.