ಆನೇಕಲ್: ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಜನಿಸಿದ್ದ ಹೆಣ್ಣು ಮಗು ಗುರುವಾರ ಅಪಹರಣವಾಗಿದೆ.
ಪಟ್ಟಣದ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಜಿಗಣಿ ಬಳಿಯ ಶ್ರೀರಾಂಪುರದಲ್ಲಿ ವಾಸವಿದ್ದ ಅಸ್ಸಾಂ ಮೂಲದ ಬಪ್ಪಂದಾಸ್ ಪತ್ನಿ ಚಂದ್ರರಾಣಿ ದಾಸ್ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮಗು ಜನಿಸಿದ್ದು, ತಾಯಿ, ಮಗುವನ್ನು ವಾರ್ಡ್‌ಗೆ ಶ್‌ಟಿ ಮಾಡಲಾಗಿತ್ತು.
ಗುರುವಾರ ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ ಅಪರಿಚಿತ ಮಹಿಳೆ, ಮಗಳನ್ನು ಹೆರಿಗೆ ಆಸ್ಪತ್ರೆಗೆ ಕರೆತಂದಿರುವುದಾಗಿ ಚಂದ್ರರಾಣಿ ಬಳಿ ಪರಿಚಯಿಸಿಕೊಂಡಿದ್ದಳು. ಸಮೀಪದಲ್ಲೇ ಕುಳಿತು 2 ಗಂಟೆ ಸಲುಗೆಯಿಂದ ವರ್ತಿಸಿದ್ದು, ಈ ವೇಳೆ ಊಟ ಕೊಡುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ಮಗು ಅಪಹರಿಸಲಾಗಿದೆ. ಅಪರಿಚಿತ ಮಹಿಳೆ ಚಲನವಲನ ಆಸ್ಪತ್ರೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾಯಿಯ ಆಕ್ರಂದನ: ಮಗು ಕಳೆದುಕೊಂಡ ಕುಟುಂಬ ಐದು ವರ್ಷದ ಹಿಂದೆ ಇಲ್ಲಿಗೆ ಬಂದು ಜಿಗಣಿ ಬಳಿಯ ಶ್ರೀರಾಂಪುರದಲ್ಲಿ ವಾಸವಾಗಿತ್ತು. ಕುಟುಂಬ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದೆ. ಮಗುವನ್ನು ಕಳೆದುಕೊಂಡ ದಂಪತಿಗೆ ಈ ಮೊದಲು ಹೆಣ್ಣು ಮಗು ಜನಿಸಿತ್ತಾದರೂ ಬದುಕಿರಲಿಲ್ಲ. ಈಗ ಜನಿಸಿದ ಎರಡನೇ ಮಗು ಕಳ್ಳತನವಾಗಿದ್ದು, ಪಾಲಕರ ಆಂಕ್ರದನ ಸ್ಥಳದಲ್ಲಿದ್ದವರಲ್ಲಿ ಕಣ್ಣೀರು ತರಿಸಿತ್ತು.
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್: ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಪ್ರಕರಣದಲ್ಲಿ ಪ್ರಮುಖವಾಗಿದ್ದು, ಅಪರಿಚಿತರು ವಾರ್ಡ್‌ಗೆ ಬಂದು ಮಗು ತೆಗೆದುಕೊಂಡು ಹೋಗುವವರೆಗೆ ಸಿಬ್ಬಂದಿ ಏನು ಮಾಡುತ್ತಿದ್ದರು ಎಂದು ಸ್ಥಳದಲ್ಲಿದ್ದವರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆನೇಕಲ್ ಪೊಲೀಸರು ಹಾಗೂ ತಾಲೂಕು ವೈದ್ಯಾಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ಆಧಾರದಲ್ಲಿ ಅಪರಿಚಿತ ಮಹಿಳೆಗಾಗಿ ಹುಡುಕಾಟ ಮುಂದುವರಿದಿದೆ.