ಔರಾದ್: ಸಂತಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶನಿವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಅಡುಗೆ ಕೋಣೆಯ ಸ್ಥಿತಿ ಕಂಡು ವಾರ್ಡನ್‌ಗೆ ತರಾಟೆಗೆ ತೆಗೆದುಕೊಂಡ ಅವರು, ನಿತ್ಯ ಮೆನು ಚಾಟ್ ಪ್ರಕಾರ ಊಟ, ಉಪಾಹಾರ ಬದಲು ಕಳಪೆ ಆಹಾರ ನೀಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯ ವಿವಿಧ ತಾಲೂಕಿನ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಶಾಲೆಯಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅಳವಡಿಸಿರುವ ಸಿಸಿ ಕ್ಯಾಮರಾ ಕೆಲಸ ಮಾಡದಿರುವುದು ಸಿಬ್ಬಂದಿ ಬೇಜವಾಬ್ದಾರಿ ತೋರಿಸಿಕೊಡುತ್ತದೆ ಎಂದು ಸಿಡಿಮಿಡಿಗೊಂಡರು.
ಶುದ್ಧ ಕುಡಿಯುವ ನೀರಿನ ಯಂತ್ರ ಎಷ್ಟೋ ದಿನ ಹಿಂದೆ ಹಾಳಾಗಿದೆ. ಆದರೆ ದುರಸ್ತಿಗೊಳಿಸುವ ಗೋಜಿಗೆ ಹೋಗದ್ದರಿಂದ ಮಕ್ಕಳಿಗೆ ಅಶುದ್ಧ ನೀರೇ ಗತಿಯಾಗಿದೆ. ಮಳೆಗಾಲ ಇರುವುದರಿಂದ ಎಲ್ಲೆಡೆ ರೋಗ ರುಜಿನುಗಳು ಬರುತ್ತಿವೆ. ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ಫೋನ್ ಮುಖಾಂತರ ವಿಷಯ ತಿಳಿಸಬೇಕೆಂದರೆ ಸಂಪರ್ಕಕ್ಕೆ ಸಿಗಲಿಲ್ಲ. ಮಕ್ಕಳಿಗೆ ಪ್ರತಿದಿನ ಪೌಷ್ಟಿಕ ಆಹಾರ ನೀಡುವ ಸಂಬಂಧ ಹಾಲು, ಮೊಸರು ಇಡಲು ಫ್ರಿಡ್ಜ್ ನೀಡಿದರೂ ಅದರಲ್ಲಿ ಒಂದು ಚಮಚದಷ್ಟು ಹಾಲು ಇಡದೆ ಕೇವಲ ನಾಲ್ಕೈದು ನೀರಿನ ಬಾಟಲಿ ಇಟ್ಟಿರುವುದನ್ನು ಕಂಡು ವಾರ್ಡನ್ ವಿರುದ್ಧ ರೇಗಾಡಿದರು.
ನಂತರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಜತೆ ಸಮಾಲೋಚನೆ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಿಡಿಪಿಒ ಇಮಾಲಪ್ಪ ಡಿ.ಕೆ., ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗೌರಿಶಂಕರ ಪರ್ತಾಪುರೆ ಇದ್ದರು.
ದಾಖಲೆ ಸಲ್ಲಿಸದೆ ಪ್ರಾಚಾರ್ಯ ರಜೆ: ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಪ್ರಾಚಾರ್ಯರು ರಜೆಯಲ್ಲಿರುವ ವಿಚಾರ ಗೊತ್ತಾಯಿತು. ಯಾಕೆ ರಜೆ ಪಡೆದಿದ್ದಾರೆ ಎಂದು ನೋಡಿದಾಗ ಯಾವುದೇ ನಿಖರವಾದ ದಾಖಲೆ ಕಾಣಲಿಲ್ಲ.
ವಸತಿ ಶಾಲೆಯಲ್ಲಿ ಯಾವುದೇ ರೀತಿಯ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ದೈಹಿಕ ಶಿಕ್ಷಕಿ ಇತರ ಸಿಬ್ಬಂದಿ ಉತ್ತಮ ರೀತಿಯಿಂದ ಕೆಲಸ ಮಾಡಬೇಕು. ನಿತ್ಯ ಮೆನು ಚಾಟ್ ಪ್ರಕಾರ ಊಟ, ಉಪಾಹಾರ ಸರಿಯಾದ ಸಮಯಕ್ಕೆ ನೀಡಬೇಕು.
| ಶಶಿಧರ ಕೋಸಂಬೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ