ಪಡುಬಿದ್ರಿ: ಅದಮಾರಿನಿಂದ ಶನಿವಾರ ಸಾಯಂಕಾಲ ತಾಯಿಯೊಂದಿಗೆ ಮುದರಂಗಡಿ ಪೇಟೆಗೆ ಆಗಮಿಸಿದ ಮಗು ನಾಪತ್ತೆಯಾಗಿದ್ದು, ಆ ಬಳಿಕ ಸಮೀಪದ ಮನೆಯೊಂದರ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅದಮಾರಿನ ಕೃಷ್ಣ ನಲ್ಕೆ ಎಂಬುವರ ಪುತ್ರಿ ಪ್ರಿಯಾ(3) ಮೃತ ಪುಟಾಣಿ. ಮುದರಂಗಡಿ ಪೇಟೆಯ ಜವುಳಿ ಅಂಗಡಿಯಲ್ಲಿ ತಾಯಿ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. ಮಗು ಅಂಗಡಿಯ ಹೊರಗಿದ್ದು, ತಾಯಿ ಖರೀದಿ ಮುಗಿಸಿ ಬಂದು ನೋಡಿದಾಗ ನಾಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಎಲ್ಲೆಡೆ ಹುಡುಕಾಡಿದರೂ ಮಗು ಸುಳಿವು ಸಿಕ್ಕಿಲ್ಲ. ಆ ಬಳಿಕ ಮನೆ ಬಳಿಯಿರುವ ಬಾವಿಯೊಂದರಲ್ಲಿ ಮಗುವಿನ ಬ್ಯಾಗ್ ಪತ್ತೆಯಾಗಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರೊಂದಿಗೆ ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.