ಜಿಲ್ಲೆ

ಬಾಲ್ಯವಿವಾಹ ನಿಷೇಧ ಜಾಗೃತಿ ಅಭಿಯಾನಕ್ಕೆ ಚಾಲನೆ ; ವಿಡಿಯೋ ಆನ್‌ವೀಲ್ಸ್ ಮೂಲಕ ಅರಿವು

ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿರುವ ಬಾಲ್ಯವಿವಾಹ ನಿಷೇಧ ಜಾಗೃತಿ ಅಭಿಯಾನಕ್ಕೆ ದೇವನಹಳ್ಳಿಯ ಜೂನಿಯರ್ ಕಾಲೇಜು ಆವರಣದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾನುವಾರ ಚಾಲನೆ ನೀಡಿದರು.

ಬಾಲ್ಯವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಡಿಯೋ ಆನ್ ವೀಲ್ಸ್ ಸಂಚಾರಿ ವಾಹನಕ್ಕೂ ಹಸಿರು ನಿಶಾನೆ ತೋರಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ನಾರಾಯಣಸ್ವಾಮಿ, ಜಿಲ್ಲೆಯಲ್ಲಿ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ತಡೆಯುವುದು ಎಲ್ಲರ ಜವಾಬ್ದಾರಿಯಾಗಿದೆ. ಅಭಿವೃದ್ಧಿಗೆ ಮಾರಕವಾಗಿರುವ ಬಾಲ್ಯವಿವಾಹ ಎಂಬ ಅನಿಷ್ಠ ಪದ್ಧತಿ ತಡೆಗಟ್ಟಬೇಕಿದೆ ಎಂದರು.

ಬಾಲ್ಯವಿವಾಹವು ಶಿಕ್ಷಾರ್ಹ ಅಪರಾಧ. ಬಾಲ್ಯವಿವಾಹ ನಿಷೇಧಕ ಕಾಯ್ದೆ-2006ರ ಪ್ರಕಾರ 18 ವರ್ಷದೊಳಗಿನ ಯಾವುದೇ ಹೆಣ್ಣುಮಗುವಿಗೆ ಹಾಗೂ 21 ವರ್ಷದೊಳಗಿನ ಗಂಡು ಮಗುವಿಗೆ ಮದುವೆ ಮಾಡಿದಲ್ಲಿ, ಅದು ಬಾಲ್ಯವಿವಾಹ ಎನಿಸಿಕೊಳ್ಳುತ್ತದೆ. ಇಂಥ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ, ಮಾಹಿತಿ ನೀಡಬೇಕು ಎಂದು ತಿಳಿವಳಿಕೆ ಹೇಳಿದರು.

ಉತ್ತಮ ಸಮಾಜ ನಿರ್ಮಾಣ ಸಾಧ್ಯ:ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಹಿಂದಿನಿಂದಲೂ ಆಚರಣೆಯಲ್ಲಿರುವ ಬಾಲ್ಯವಿವಾಹ ಪದ್ಧತಿಯಿಂದಾಗಿ, ಬಡತನ, ಅನಕ್ಷರತೆ, ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿವೆ. ಬಾಲ್ಯವಿವಾಹದಿಂದ ಮಕ್ಕಳ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದೆ. ಮಕ್ಕಳು ಅವರ ಬಾಲ್ಯವನ್ನು ಸ್ವಚ್ಛಂದವಾಗಿ ಅನುಭವಿಸಲು ಬಿಟ್ಟಾಗ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಹಾಗೂ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಪಂ ಸಿಇಒ ಅಧಿಕಾರಿ ಕೆ.ರೇವಣ್ಣಪ್ಪ ಮಾತನಾಡಿ, ಬಾಲ್ಯವಿವಾಹದಿಂದ ಬಹಳಷ್ಟು ದುಷ್ಪರಿಣಾಮಗಳಿವೆ. ಅದನ್ನು ತಡೆಗಟ್ಟಿ ಮಕ್ಕಳ ಬಾಳು ಬೆಳಗಿಸಿ ಬಾಲ್ಯವಿವಾಹಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಕರೆ ನೀಡಿದರು.

ಅಪರ ಜಿಲ್ಲಾಧಿಕಾರಿ ವಿಜಯಾ ಇ. ರವಿಕುಮಾರ್ ಮಾತನಾಡಿ, ಬಾಲ್ಯವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ಅಭಿಯಾನದ ಮೂಲಕ ಅರಿವಿನ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಏರ್ಪಡಿಸಲಾಗುತ್ತಿದೆ. ಜನರ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಇಂಥ ಕಾರ್ಯಕ್ರಮಗಳು ಸಹಕಾರಿ ಎಂದರು.

ಬಾಲ್ಯವಿವಾಹ ನಿಷೇಧ ಜಾಗೃತಿ ಕುರಿತ ಭಿತ್ತಿಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಹಿ ಸಂಗ್ರಹ ಅಭಿಯಾನವೂ ನಡೆಯಿತು. ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಬಾಲ್ಯವಿವಾಹ ನಿಷೇಧ ಕುರಿತು ಅರಿವು ಮೂಡಿಸಿದರು. ಪುರಸಭೆ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಮತ್ತಿತರರಿದ್ದರು.