Child marriage is on the rise 
ಜಿಲ್ಲೆ

ಬಾಲ್ಯವಿವಾಹ ಹೆಚ್ಚುತ್ತಿರುವುದು ಸಲ್ಲ

ಕುಳಗೇರಿ ಕ್ರಾಸ್: ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಪರೋಕ್ಷವಾಗಿ ಅವರ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದ್ದು, ಸರ್ಕಾರ ಸಾಕಷ್ಟು ಕಠಿಣ ಕಾನೂನು ಜಾರಿಗೆ ತಂದರೂ ಬಾಲ್ಯವಿವಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಲ್ಲ ಎಂದು ನರಗುಂದ ಸಹಾಯಕ ತೋಟಗಾರಿಕೆ ಅಧಿಕಾರಿ ತೇಜಶ್ವಿನಿ ಶಿರಿಯಪ್ಪಗೌಡ್ರ ಹೇಳಿದರು.

ಸಮೀಪದ ಭೈರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಅಕ್ಕಮಹಾದೇವಿ ಇಡೀ ವಿಶ್ವಕಂಡಂತಹ ದಿಟ್ಟ ಮಹಿಳೆ. ಅವರ ಜೀವನ ಸಂದೇಶ ನಮಗೆಲ್ಲ ದಾರಿದೀಪ. 12ನೇ ಶತಮಾನದಲ್ಲಿ ಮೌಢ್ಯಾಚರಣೆ ಧಿಕ್ಕರಿಸಿ ಮಹಿಳೆಯರ ಪರ ಧ್ವನಿ ಎತ್ತಿ ಸೀ ಸ್ವಾತಂತ್ರೃವನ್ನು ಬಯಸಿದ ಅಕ್ಕಮಹಾದೇವಿ ಸಾವಿರಾರು ವಚನಗಳನ್ನು ರಚಿಸಿದ್ದು, ಅವು ಸರ್ವಕಾಲಿಕವಾಗಿವೆ ಎಂದರು.

ನ್ಯಾಯವಾದಿಗಳಾದ ಸುವರ್ಣ ಅಕ್ಕಿ ಮಾತನಾಡಿ, ಮಹಿಳೆಯರು ಪ್ರತಿಯೊಂದು ರಂಗದಲ್ಲಿಯೂ ಮುಂಚೂಣಿಗೆ ಬರಬೇಕು. ಸಮಾಜದಲ್ಲಿ ಮಹಿಳೆಯರು ಸಾಕಷ್ಟು ಶೋಷಣೆ ಅನುಭವಿಸುತ್ತಿದ್ದಾರೆ. ಅವುಗಳನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಇದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.

ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ನಿವೃತ್ತ ಬಿಒಇ ಮಂಗಳಾ ಪಾಟೀಲ ಪ್ರಾಸ್ತಾವಿಕ ನುಡಿದರು. ಸಾಧಕ ಮಹಿಳೆಯರಾದ ಸಾಹಿತಿ ಡಾ. ವಿ.ವಿ. ಹಿರೇಮಠ, ನ್ಯಾಯವಾದಿ ಸುವರ್ಣ ಅಕ್ಕಿ, ತೇಜಶ್ವಿನಿ ಶಿರಿಯಪ್ಪಗೌಡ್ರ ಅವರನ್ನು ಸತ್ಕರಿಸಲಾಯಿತು.

ಸುಕನ್ಯಾ ಸಾಲಿ, ದ್ರಾಕ್ಷಾಯಣಿ ಶಿವಪ್ಪಯ್ಯನಮಠ, ಪದ್ವಾವತಿ ಗಾಣಿಗೇರ, ಭಾವನಾ ಪಾಟೀಲ, ಡಾ. ವೀರೇಶ ಸತ್ತಿಗೇರಿ, ಈರಪ್ಪ ಕುಪ್ಪಸ್ತ, ಈರಪ್ಪ ತಿಗಡಿ ಇದ್ದರು.

ಪ್ರೋ. ಆರ್.ಕೆ. ಐನಾಪೂರ ನಿರ್ವಹಿಸಿದರು, ಮಹಾಂತೇಶ ಹಿರೇಮಠ ಸ್ವಾಗತಿಸಿ ವಂದಿಸಿದರು.