ಮಡಿಕೇರಿ:
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ಮೀನಾಳ ಭೀಕರ ಹತ್ಯೆ ಪ್ರಕರಣದ ಹಿಂದೆ ಬಾಲ್ಯ ವಿವಾಹದ ಅನಿಷ್ಠ ಅಂಟಿಕೊಂಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಹೆಚ್ಚು ಸುಶಿಕ್ಷಿತರು ಮತ್ತು ಕಾನೂನಿಗೆ ಗೌರವ ಕೊಡುವ ಶಿಸ್ತನ್ನು ರೂಢಿಸಿಕೊಂಡಿರುವವರನ್ನು ಹೊಂದಿರುವ ಜಿಲ್ಲೆ ಹೆಗ್ಗಳಿಕೆಯ ಕೊಡಗಿನಲ್ಲೂ ಈ ಪದ್ಧತಿ ಜೀವಂತ ಇರುವುದು ಆತಂಕಕ್ಕೆ ಕಾರಣವಾಗಿದೆ. ಸರ್ಕಾರದ ಜಾಗೃತಿ ಕಾರ್ಯಕ್ರಮಗಳು, ಹೆಚ್ಚುತ್ತಿರುವ ವಿದ್ಯಾವಂತರ ಸಂಖ್ಯೆ ಮಧ್ಯೆಯೂ ಬಾಲ್ಯ ವಿವಾಹದ ಕಡೆಗೆ ಒಲವು ತೋರುವ ಪೋಷಕರ ನಡೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಸ್‌ಎಲ್‌ಸಿ ಪೂರೈಸಿದ ಕುಂಬಾರಗಡಿಗೆ ಗ್ರಾಮದ ಮೀನಾಳಿಗೆ ಇನ್ನೂ ೧೬ ವರ್ಷ ತುಂಬಿಲ್ಲ. ಆಗಲೇ ಹಮ್ಮಿಯಾಲ ಗ್ರಾಮದ ೩೪ ವರ್ಷದ ಪ್ರಕಾಶ್ ಈ ಬಾಲಕಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಮೀನಾಳ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿದ್ದ ಪ್ರಕಾಶ್ ಆಕೆಯ ಹೆತ್ತವರಿಗೆ ಸಹಾಯ ಮಾಡುವ ನೆಪದಲ್ಲಿ ತನ್ನ ಪ್ರೀತಿಗೆ ಅವರಿಂದಲೂ ಸಹಮತ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಮೀನಾಳ ಸಹೋದರಿಯರ ವಿರೋಧದ ಮಧ್ಯೆಯೂ ಆಕೆಯನ್ನು ಮದುವೆ ಮಾಡಿಕೊಡಲು ಒಪ್ಪಿಸಿದ್ದ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಧ್ಯಪ್ರವೇಶದಿಂದ ಮದುವೆ ನಿಂತುಹೋದರೂ ಮೀನಾಳ ಪ್ರಾಣ ಉಳಿಯಲಿಲ್ಲ.
ಪ್ರಕಾಶನ ಪೈಶಾಚಿಕ ಕೃತ್ಯದಿಂದಾಗಿ ಮೀನಾಳ ಬಾಲ್ಯ ವಿವಾಹ ಪ್ರಯತ್ನ ಬೆಳಕಿಗೆ ಬಂತು. ಆದರೆ ಇಂಥ ಹಲವು ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದು ಸ್ಥಳೀಯರು ಅಥವಾ ಬಂಧುಗಳು ಪ್ರಜ್ಞಾವಂತರಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ಬಂದು ಮದುವೆಗಳು ನಿಂತಿರುವ ಉದಾಹರಣೆಗಳಿವೆ. ಮತ್ತೆ ಕೆಲವು ಕಡೆಗಳಲ್ಲಿ ಸದ್ದಿಲ್ಲದೆ ನಡೆದು ಹೋಗಿವೆ. ಸುಶಿಕ್ಷಿತರ ಜಿಲ್ಲೆ ಕೊಡಗಿನಲ್ಲಿ ಈ ರೀತಿಯ ಬಾಲ್ಯ ವಿವಾಹ ನಡೆಯಲು ಪ್ರಮುಖವಾಗಿ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳ ಕಡೆಗೆ ಬೆರಳು ತೋರಿಸಲಾಗುತ್ತಿದೆ.
ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸರ್ಕಾರದ ಸಾಕಷ್ಟು ಕಾಳಜಿ ತೋರಿಸುತ್ತಿದೆ. ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ. ಈ ಮಧ್ಯೆಯೂ ಬಡತನ, ಅಜ್ಞಾನ, ಮೂಢನಂಬಿಕೆ, ಅರಿವಿನ ಕೊರತೆ, ಅನಕ್ಷರತೆ, ಕಾನೂನು ತಿಳುವಳಿಕೆ ಕೊರತೆ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ, ಹೆಣ್ಣು ಮಕ್ಕಳು ಜವಾಬ್ದಾರಿ ಎನ್ನುವ ಮನೋಭಾವ, ಮನೆಯಲ್ಲಿರುವ ವೃದ್ಧರು ಹಾಗೂ ಅನಾರೋಗ್ಯಪೀಡಿತರ ಆಸೆ ಮತ್ತಿತರ ಕಾರಣಗಳಿಂದ ಬಾಲ್ಯ ವಿವಾಹಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ.
ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಕೊಡಗಿನಲ್ಲಿ ಕಳೆದ ೩ ವರ್ಷಗಳಲ್ಲಿ ಒಟ್ಟು ೭ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ೨೦೨೦ -೨೧ರಲ್ಲಿ ೨೯೬, ೨೦೨೧-೨೨ ರಲ್ಲಿ ೪೧೮ ಹಾಗೂ ೨೦೨೨-೨೩ರಲ್ಲಿ ೪೨೮ ಸೇರಿದಂತೆ ಕಳೆದ ೩ ವರ್ಷಗಳಲ್ಲಿ ಒಟ್ಟು ೧೦೪೨ ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದರೆ ಕೊಡಗಿನಲ್ಲಿ ೨೦೨೦ -೨೧ರಲ್ಲಿ ೨, ೨೦೨೧-೨೨ ರಲ್ಲಿ ೩ ಹಾಗೂ ೨೦೨೨-೨೩ರಲ್ಲಿ ೨ ಸೇರಿದಂತೆ ಒಟ್ಟು ೭ ಬಾಲ್ಯ ವಿವಾಹ ಪ್ರಕರಣಗಳು ನಡೆದಿವೆ. ರಾಜ್ಯದಲ್ಲಿ ನಡೆದಿರುವ ಪ್ರಕರಣಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ದಾಖಲಾಗಿರುವ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಕಡಿಮೆ ಅನ್ನಿಸಿದರೂ ವಿದ್ಯಾವಂತರು ಹೆಚ್ಚು ಇರುವ ಜಿಲ್ಲೆಯಲ್ಲೂ ಈ ಪಿಡುಗು ಇನ್ನೂ ಜೀವಂತವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೊಡಗಿನ ಗಿರಿಜನ ಹಾಡಿಗಳಲ್ಲೂ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿದೆ. ಬಹುತೇಕರಿಗೆ ವಿದ್ಯಾಭ್ಯಾಸದ ಕೊರತೆ, ಹೊರ ಸಮಾಜದ ಸಂಪರ್ಕ ಇಲ್ಲದಿರುವುದು, ಸಂಪ್ರದಾಯ ಎನ್ನುವ ನಂಬಿಕೆ, ದೇವರ ಶಾಪದ ಭಯ ಹಾಗೂ ಅಪ್ರಾಪ್ತರಲ್ಲಿ ಪ್ರೇಮ ಪ್ರಕರಣಗಳು ಕೂಡ ಇದಕ್ಕೆ ಕಾರಣವಾಗಿದೆ ಎನ್ನುವುದು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರ ಅಭಿಪ್ರಾಯ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -೫ ಪ್ರಕಾರ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಿಯರ ಬಾಲ್ಯವಿವಾಹ ಪ್ರಕರಣಗಳು ಶೇ.೨೪.೭ರಷ್ಟು ಇದ್ದರೆ, ಬಾಲಕರ ಬಾಲ್ಯವಿವಾಹ ಪ್ರಕರಣಗಳು ಶೇ. ೭.೨ರಷ್ಟಿದೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಬಾಲಕಿಯರ ಬಾಲ್ಯ ವಿವಾಹ ಪ್ರಮಾಣ ಶೇ.೧೬.೧ರಷ್ಟಿದ್ದು, ಬಾಲಕರ ಬಾಲ್ಯವಿವಾಹ ಪ್ರಮಾಣ ಶೇ. ೪.೫ರಷ್ಟಿದೆ.
ಕೊಡಗಿನಲ್ಲಿ ದಾಖಲಾಗಿರುವ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಇಷ್ಟೂ ಪ್ರಕರಣಗಳು ಗಿರಿಜನ ಹಾಡಿಗಳಲ್ಲಿ ನಡೆದಿರುವುದು ವಿಶೇಷ. ಸರ್ಕಾರದ ಗಮನಕ್ಕೆ ಬಂದಿರುವ ಪ್ರಕರಣಗಳು ಇಷ್ಟಾದರೆ, ಅಧಿಕಾರಿಗಳ ಕಣ್ಣು ತಪ್ಪಿಸಿ ಆಗಾಗ್ಗೆ ಬಾಲ್ಯ ವಿವಾಹಗಳು ನಡೆಯುತ್ತಿರುತ್ತದೆ ಎನ್ನುತ್ತಾರೆ ಈ ಸಂಬಂಧ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಯೊಂದರ ಕಾರ್ಯಕರ್ತೆ. ಇಂಥ ಪ್ರಕರಣಗಳು ತಮ್ಮ ಗಮನಕ್ಕೆ ಬಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸುವ ಮೂಲಕ ಇಂತಹ ಅನಿಷ್ಟದ ಹೆಸರಲ್ಲಿ ಎಳೆವೆಯಲ್ಲೇ ಸಂಸಾರ ಬಂಧನಕ್ಕೆ ಒಳಗಾಗುವುದನ್ನು ತಪ್ಪಿಸಲಾಗಿದೆ ಎಂದು ಹೇಳುತ್ತಾರೆ.
ಬಾಲ್ಯ ವಿವಾಹ ನಿಷೇಧ ಕಾನೂನನ್ನು ಸಮರ್ಪಪಕವಾಗಿ ಜಾರಿಗೆ ತರುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಡಲ್ ಇಲಾಖೆಯಾಗಿದ್ದು, ಕಂದಾಯ, ಕಾರ್ಮಿಕ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆಗಳು ಮಾತ್ರವಲ್ಲದೆ ಸ್ಥಳೀಯ ಸಂಸ್ಥೆ ಅಧಿಕಾರಿ, ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನೂ ಇದರಲ್ಲಿ ಸೇರಿಸಿಕೊಳ್ಳಲಾಗಿದೆ. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಈ ಎಲ್ಲಾ ಇಲಾಖೆಗಳಿಗೂ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದ್ದು, ಸಂಘಟಿತ ಮತ್ತು ಸಮನ್ವಯತೆಯಿಂದ ಕೆಲಸ ಮಾಡಲು ಸರ್ಕಾರ ಸೂಚಿಸಿದೆ.
ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಬಾಲ್ಯವಿವಾಹ ನಡೆಯುತ್ತಿರುವ ಮಾಹಿತಿ ದೊರೆತ ಕೂಡಲೇ ಬಾಲ್ಯವಿವಾಹವನ್ನು ತಡೆಗಟ್ಟಲು ಆಯಾಯ ಜಿಲ್ಲೆ, ತಾಲೂಕಿಗೆ ಸಂಬಂಧಿಸಿದ ವಿವಿಧ ಭಾಗೀದಾರ ಇಲಾಖೆಗಳ ಬಾಲ್ಯವಿವಾಹ ನಿಷೇಧಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳ ಜತೆಗೂಡಿ ಬಾಲ್ಯವಿವಾಹಗಳನ್ನು ತಡೆಗಟ್ಟಲಾಗುತ್ತಿದೆ.
ಬಾಲ್ಯವಿವಾಹವನ್ನು ತಡೆಗಟ್ಟಿದ ಪ್ರಕರಣಗಳಲ್ಲಿ ಬಾಲಕ ಅಥವಾ ಬಾಲಕಿಯರು ಬಾಲ್ಯವಿವಾಹವಾಗದಂತೆ ೧೮ ವರ್ಷದವರೆಗೆ ಅವರನ್ನು ಗಮನಿಸಲಾಗುತ್ತಿರುತ್ತದೆ. ಬಾಲ್ಯವಿವಾಹ ಕುರಿತು ದೂರು ಸಲ್ಲಿಸಲು ಸಹಾಯವಾಣಿ ಸಂಖ್ಯೆ ೧೦೯೮ ದಿನದ ಎಲ್ಲಾ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಆಗಾಗ್ಗೆ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿರುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಶಿಕ್ಷಿತರ ಸಂಖ್ಯೆ ಕಡಮೆ ಇದೆ. ಹೀಗಾಗಿಯೇ ಬಾಲ್ಯ ವಿವಾಹ ಪ್ರಕರಣ ಈಗಲೂ ನಡೆಯುತ್ತಿದೆ. ಸಾಮಾನ್ಯವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬಾಲ್ಯವಿವಾಹ ತಡೆದ ಬಳಿಕ ಅಲ್ಲಿಗೆ ಪ್ರಕರಣ ಮುಗಿಯುತ್ತಿತ್ತು. ಆದರೆ ಕುಂಬಾರಗಡಿಗೆ ಪ್ರಕರಣ ನಮ್ಮ ಇಲಾಖೆಗೆ ಹೊಸ ಅನುಭವ. ಇಂಥ ದುರ್ಘಟನೆಯನ್ನು ಯಾರು ಕೂಡ ಊಹಿಸಿರಲಿಲ್ಲ. ಇನ್ನು ಮಂದೆ ಈ ವಿಷಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು. ಬಾಲ್ಯ ವಿವಾಹ ತಡೆ ಹಿಡಿದ ಪ್ರಕರಣಗಳಲ್ಲಿ ಸಂತ್ರಸ್ತೆಗೆ ಹೆಚ್ಚಿನ ಪೊಲಿಸ್ ಭದ್ರತೆ ಕೊಡಲಾಗುವುದು.
ಕೆ. ರಾಮರಾಜನ್, ಕೊಡಗು ಎಸ್‌ಪಿ
ಮೀನಾಳ ವಿವಾಹ ಪ್ರಯತ್ನ ತಡೆದಿದ್ದ ಬೆನ್ನಲ್ಲೇ ಆ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಯೋಚನೆ ಮಾಡಲಾಗಿತ್ತು. ಆದರೆ ಆಕೆಯ ಹತ್ಯೆ ಅದನ್ನು ಮುಂದೂಡುವಂತೆ ಮಾಡಿದೆ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ನಮಗೆ ವಾರ್ಷಿಕವಾಗಿ ೩೦-೪೦ ದೂರುಗಳು ಬರುತ್ತವೆ. ಈ ಸಂದರ್ಭದಲ್ಲಿ ಸಂಬಂಧಿಸಿದವರಿಗೆ ಜಾಗೃತಿ ಮೂಡಿಸಿ ಸಂತ್ರಸ್ತರನ್ನು ರಕ್ಷಿಸಲಾಗುತ್ತದೆ. ಬಾಲ್ಯ ವಿವಾಹ ತಡೆಗಟ್ಟುವುದು ಎಲ್ಲರ ಸಾಮೂಹಿಕ ಜವಾಬ್ದಾರಿ ಆಗಿದೆ. ಈ ಬಗ್ಗೆ ಮತ್ತಷ್ಟು ಜಾಗೃತಿಯ ಅಗತ್ಯವೂ ಇದೆ.
ಬಿ. ಈರಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಕೊಡಗು
ವಿವಾಹವೇ ಜೀವನದ ಅತ್ಯಂತ ಮುಖ್ಯ ಗುರಿ ಎಂದು ತಿಳಿದಿರುವ ಕೆಲವು ಪೋಷಕರು, ಜೊತೆಗೆ ಬಡತನ, ಅಜ್ಞಾನ, ಅಥವಾ ತಪ್ಪು ನಡೆಯುತ್ತಿದ್ದರೂ ಧ್ವನಿ ಎತ್ತದೇ ಮೌನವಾಗಿರುವ ಸಮಾಜ. ಕುಟುಂಬದವರಿಗೆ ಭವಿಷ್ಯದ ಕುರಿತ ಅನಾವಶ್ಯಕ ಭಯ. ಪ್ರಬುದ್ಧತೆಯ ಕೊರತೆ, ಕಾನೂನಿನ ಬಗ್ಗೆ ತಾತ್ಸಾರ ಇವುಗಳು ಬಾಲ್ಯ ವಿವಾಹ ಪದ್ಧತಿ ಜೀವಂತವಾಗಿರಲು ಸಹಕರಿಸುತ್ತಿವೆ.
ಗೀತಾ ಗಿರೀಶ್, ಆರ್ಥಿಕ ಮತ್ತು ವಿಮಾ ಸಲಹೆಗಾರರು, ಮಡಿಕೇರಿ