ಜಿಲ್ಲೆ

ಬಾಲ್ಯವಿವಾಹ ತಡೆಗೆ ಸಹಕರಿಸಲು ಮನವಿ

ಶಿವರಾಜ.ಎಂ

ಹೊಸಕೋಟೆ: ಬಾಲ್ಯವಿವಾಹದಿಂದ ಹೆಣ್ಣು ಮಕ್ಕಳ ಭವಿಷ್ಯ ನಾಶವಾಗುತ್ತಿದ್ದು, ಬಾಲ್ಯವಿವಾಹ ತಡೆಯುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದೆ. ಸಮುದಾಯ ಕೂಡ ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ತಾಲೂಕಿನ ದೊಡ್ಡದೇನಹಳ್ಳಿಯಲ್ಲಿ ವಿವಾಹಿತ, ಬಾಲಕಿಯರ ಸಶಕ್ತಿಕರಣದ ಯೋಜನೆಯಡಿ, ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತ ಕಾನೂನು ಕೈಪಿಡಿ ಲೋಕಾರ್ಪಣೆ ಮಾಡಿ, ಮಾತನಾಡಿದರು.
ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಬಾಲ್ಯವಿವಾಹ ಜೀವಂತವಾಗಿರುವುದು ಕಳವಳಕಾರಿ ವಿಷಯ. ಹೆಣ್ಣು ಮಕ್ಕಳು ಪ್ರತಿ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯಗಳ ಮೂಲಕ ಅಭಿವೃದ್ಧಿ ಹೊಂದುತ್ತಿರುವುದು ಇಡೀ ಜಗತ್ತಿಗೆ ಗೊತ್ತಿದೆ. ಹೀಗಿರುವಾಗ ಹೆಣ್ಣು ಮಕ್ಕಳು ಕುಟುಂಬಕ್ಕೆ ಹೊರೆಯೆಂದು ಸಣ್ಣ ವಯಸ್ಸಿನಲ್ಲೇ ಮದುವೆ ಮಾಡಬೇಡಿ ಎಂದರು.
ಕಾರ್ಯಕ್ರಮ ಸಂಯೋಜಕ ಟಿ.ವೆಂಕಟೇಶ್ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಪ್ರತಿ ಗ್ರಾಮದಲ್ಲಿರುವ ಸಂಘ ಸಂಸ್ಥೆಗಳು ಸಮುದಾಯಗಳಲ್ಲಿ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು ಹಾಗೂ ಕಾನೂನಿನ ಬಗ್ಗೆ ಪಾಲಕರು ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದರು.
ಯೋಜನಾ ಸಂಯೋಜಕಿ ಅನಲಾರೆಡ್ಡಿ ಮಾತನಾಡಿ, ವಿವಾಹಿತ, ಬಾಲಕಿಯರನ್ನು ಸಶಕ್ತಿಕರಣಗೊಳಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಹಣ್ಣು ಮಕ್ಕಳೇ ಮುಂದಾಗಿರುವುದು ಸಂತಸದ ವಿಚಾರ. ಅವರಿಗೆ ಆಸಕ್ತಿ ಇರುವಂಥ ಕೌಶಲಗಳ ಜತೆಗೆ ಆರ್ಥಿಕ ಚಟುವಟಿಕೆಗಳ ತರಬೇತಿ ನೀಡಲಾಗುತ್ತಿದೆ. ರಾಜ್ಯದ 15 ಜಿಲ್ಲೆಗಳಲ್ಲಿ ಈ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಗ್ರಾಮಸಭೆಗಳಲ್ಲಿ ಮಕ್ಕಳ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಸಹಕರಿಸಬೇಕು ಎಂದರು. ಅರ್ಪಣಂ ಸಂಸ್ಥೆಯ ಭಾರತಿ, ಶಾಹೀದಾ, ಸ್ಫೂರ್ತಿ, ಸಂಸ್ಥೆ ಕಾರ್ಯದರ್ಶಿ ಶಿವಮ್ಮ ಇದ್ದರು.