ಕೋಲಾರ: ಜೀವನದಲ್ಲಿ ಪ್ರಮುಖ ಘಟ್ಟವಾಗಿರುವ ಬಾಲ್ಯಾವಸ್ಥೆಯನ್ನು ಸರಿಯಾದ ದೃಷ್ಟಿಕೋನದಿಂದ ಮುನ್ನಡೆಸುವ ಜವಾಬ್ದಾರಿ ಪಾಲಕರು, ಸಮಾಜದ್ದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ, ಯೌವ್ವನ, ವೃದ್ಧ್ಯಾಪ್ಯ ಎಂಬ ಮೂರು ಘಟ್ಟ ಬರುತ್ತದೆ. ಇವುಗಳಲ್ಲಿ ಬಾಲ್ಯಾವಸ್ಥೆಯೇ ಬುನಾದಿ. ಮುಂದಿನ ಜೀವನ ಇದನ್ನು ಆಧರಿಸಿ ಮುನ್ನಡೆಯುತ್ತದೆ. ಹಾಗಾಗಿ ಪಾಲಕರು ಮಕ್ಕಳಿಗೆ ಅವರ ಹಕ್ಕುಗಳನ್ನು ಕಲ್ಪಿಸಿಕೊಟ್ಟು ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ದೇಶದಲ್ಲಿ ಅನಕ್ಷರಸ್ಥ ಹಾಗೂ ಬಡಕುಟುಂಬಗಳಲ್ಲಿ ಬಾಲ ಕಾರ್ಮಿಕ ಪದ್ಥತಿ ಇನ್ನೂ ಜೀವಂತವಾಗಿದ್ದು, ಇವರಿಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಸಂಸ್ಥೆಯು ಜೂ.12 ಅನ್ನು ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಎಂದು ಘೋಷಿಸಿದೆ. ಭಾರತದಲ್ಲೂ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಮಾಡುತ್ತಿದ್ದು ಇದರ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.
ಪ್ರಸ್ತುತ ಸಮಾಜದಲ್ಲಿ ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗಾಗಿದೆ. ಇದರಿಂದ ಮಗು ತನ್ನ ಬಾಲ್ಯದ ವ್ಯವಸ್ಥೆಯನ್ನು ಕಳೆದುಕೊಳ್ಳುತ್ತದೆ. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು 2016ರಲ್ಲಿ ತಿದ್ದುಪಡಿ ತಂದಿದೆ. ಇದರನ್ವಯ 1ರಿಂದ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೈಗಾರಿಕಗಳಲ್ಲಿ ಕೆಲಸಕ್ಕೆ ಸೇರಿಸಿಕೊಂಡರೆ ಅವರಿಗೆ 6 ತಿಂಗಳು ಜೈಲು ಹಾಗೂ 50,000 ರೂ. ದಂಡ ವಿಧಿಸಲು ಅವಕಾಶವಿದೆ ಎಂದು ಹೇಳಿದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್ ಮಾತನಾಡಿ, ಬಾಲಕಾರ್ಮಿಕ ಪದ್ಥತಿ ತಡೆಗಟ್ಟಲು ಸಂವಿಧಾನದಲ್ಲಿ ಅನೇಕ ಕಾನೂನುಗಳನ್ನು ನೀಡಿದೆ. 1986ರಲ್ಲಿ ಬಾಲಕಾರ್ಮಿಕ ಪದ್ಥತಿ ವಿರುದ್ಧ ಕಾನೂನನ್ನು ಜಾರಿಗೆ ತಂದರು. 21ಎ ವಿಧಿಯ ಪ್ರಕಾರ 6 ರಿಂದ 14 ವರ್ಷದೊಳಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ನೀಡಬೇಕು. ಸರ್ಕಾರವೇ ಇದರ ಜವಾಬ್ದಾರಿ ಹೊಂದಿರುತ್ತದೆ. 45ನೇ ವಿಧಿಯ ಪ್ರಕಾರ ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ನೀಡುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ದೇಶದ ಪ್ರತಿಯೊಂದು ಮಗುವು ವಿದ್ಯಾಭ್ಯಾಸ ಪಡೆದುಕೊಂಡರೆ ದೇಶವು ಅಭಿವೃದ್ಧಿಶೀಲ ರಾಷ್ಟ್ರವಾಗಿ ವಿಶ್ವಕ್ಕೆ ಮಾದರಿಯಾಗುತ್ತದೆ. ಪ್ರತಿಯೊಬ್ಬ ನಾಗರೀಕರು ಜವಾಬ್ದಾರಿಯುತವಾಗಿ ಬಾಲಕಾರ್ಮಿಕ ಪದ್ಧತಿ ತೊಡೆದು ಹಾಕುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪ್ರತಿಜ್ಞಾ ವಿಧಿ ಭೋಧಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಚ್.ಗಂಗಾಧರ್, ಡಿಡಿಪಿಐ ಕೆ. ರತ್ನಯ್ಯ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಬಿ.ಪಾಟೀಲ್, ಕೋಲಾರ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್, ಪ್ರಧಾನ ಕಾರ್ಯದರ್ಶಿ ರಘುಪತಿಗೌಡ ಇದ್ದರು.