ಜಿಲ್ಲೆ

4 ವರ್ಷದಲ್ಲಿ 60 ಬಾಲಕಾರ್ಮಿಕರ ರಕ್ಷಣೆ

ಮತ್ತೊಂದು ಸುತ್ತಿನ ಕಾರ್ಯಾಚರಣೆಗೆ ಇಲಾಖೆ ಸಿದ್ಧತೆ

ಶಿಕ್ಷಣ ವಂಚಿತ ಮಕ್ಕಳ ಪತ್ತೆಗೆ ಯೋಜನೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ವಿವಿಧ ಇಲಾಖೆ ಸಹಯೋಗದಿಂದ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 60 ಬಾಲಕಾರ್ಮಿಕರನ್ನು ರಕ್ಷಿಸಲಾಗಿದ್ದು, 12 ಪ್ರಕರಣಗಳು ದಾಖಲಾಗಿದೆ.
ಬಾಲಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನೆಗೆ ಶ್ರಮಿಸುತ್ತಿರುವ ಇಲಾಖೆಗಳು, ವಿವಿಧ ಹಂತದಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದು, ಪ್ರತಿ ವರ್ಷ ಬಾಲಕಾರ್ಮಿಕರು ಪತ್ತೆಯಾಗುತ್ತಿದ್ದಾರೆ. ಪ್ರಮುಖವಾಗಿ ಹೊಟೇಲ್, ಗ್ಯಾರೆಜ್, ಲಾಡ್ಜ್, ಡಾಬಾಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಕೆಲಸ ಕಲಿಯಲಿ ಎಂದು ಪಾಲಕರೇ ಮಕ್ಕಳನ್ನು ಕಳುಹಿಸುತ್ತಿದ್ದು, ಕ್ರಮೇಣ ಮಕ್ಕಳು ಅದರಲ್ಲೇ ಮುಂದುವರಿಯುವ ಸನ್ನಿವೇಶ ಕಾಣಬಹುದು. ಆದ್ದರಿಂದ ಕಲಿಯುವ ವಯಸ್ಸಿನಲ್ಲೇ ದುಡಿಮೆಗಿಳಿಯುವ ಮಕ್ಕಳು, ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಸಿಗೆ ರಜೆಯಲ್ಲಿ ಹೆಚ್ಚು ಬೇಸಿಗೆ ರಜೆ ವೇಳೆ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ದುಡಿಮೆಗೆ ಅಂಟಿಕೊಳ್ಳುತ್ತಿರುವುದು, ಇಲಾಖೆಗಳು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಶಾಲೆಗಳಿಗೆ ರಜೆ ೋಷಿಸುತ್ತಿದ್ದಂತೆ ಪಾಲಕರು, ಸಂಬಂಧಿಕರು ಮಕ್ಕಳನ್ನು ಕೆಲಸಗಳಿಗೆ ಕಳುಹಿಸಲು ಉತ್ಸುಕತೆ ತೋರಿಸುತ್ತಿದ್ದಾರೆ. ಭಾಗಶಃ ಮಕ್ಕಳು ಪಾಲಕರ ಒತ್ತಾಯಕ್ಕೆ ಮಣಿದು, ಕೆಲಸಗಳಿಗೆ ಹೋಗಲಾರಂಭಿಸುತ್ತಾರೆ. ಕೊನೆಗೆ ಶಾಲೆಗಳು ಪುನರಾರಂಭಗೊಂಡರೂ ಶಾಲೆಗಳತ್ತ ಮುಖ ಮಾಡಲು ಮಕ್ಕಳು ಹಿಂದೇಟು ಹಾಕುತ್ತಾರೆ. ಇದು ಪ್ರತಿವರ್ಷ ಶಿಕ್ಷಣ ಇಲಾಖೆ ನಡೆಸುವ ದಾಖಲಾತಿ ಆಂದೋಲನದ ವೇಳೆ ಪತ್ತೆಯಾಗಿದೆ.

ಅಧಿಕಾರಿಗಳು ಬಿಜಿ ಬಾಲಕಾರ್ಮಿಕ ಇಲಾಖೆ, ಶಿಕ್ಷಣ, ಪೊಲೀಸ್ ಸೇರಿ ಹಲವು ಇಲಾಖೆಗಳ ಸಹಯೋಗದಲ್ಲಿ ಪ್ರತಿವರ್ಷ ಕಾರ್ಯಾಚರಣೆ ರೂಪಿಸಿ, ಬಾಲಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತದೆ. ಅದರಲ್ಲೂ ಸಾಮಾನ್ಯವಾಗಿ ಬೇಸಿಗೆ ರಜೆ ೋಷಣೆಯಾಗುವ ಏಪ್ರಿಲ್ ಹಾಗೂ ಮೇನಲ್ಲಿ ಹೆಚ್ಚಿನ ಮಟ್ಟದಲ್ಲಿ ಕಾರ್ಯಾಚರಣೆ ರೂಪಿಸಲಾಗುತ್ತದೆ. ಆದರೆ, ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ಎದುರಾಗಿದ್ದರಿಂದ ವಿವಿಧ ಇಲಾಖೆ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಬಿಜಿಯಾಗಿದ್ದರು. ಈ ಹಿನ್ನೆಲೆ, ವಿಶೇಷ ಕಾರ್ಯಾಚರಣೆಗಳಿಗೆ ಈ ಬಾರಿ ಬ್ರೇಕ್ ಬಿದ್ದಿತ್ತು. ಇದೀಗ ಚುನಾವಣೆ ಮುಗಿದು ಅಧಿಕಾರಿಗಳು ಇಲಾಖಾ ಕರ್ತವ್ಯಕ್ಕೆ ಮರಳಿದ್ದಾರೆ. ಆದ್ದರಿಂದ ಜಿಲ್ಲೆಯ ನಾಲ್ಕೂ ತಾಲೂಕಿನಲ್ಲಿ ಮತ್ತೊಂದು ಸುತ್ತಿನ ಕಾರ್ಯಾಚರಣೆ ರೂಪಿಸಲು ಅಧಿಕಾರಿಗಳ ತಂಡ ಸಜ್ಜಾಗಿದೆ.

ದಾಖಲಾತಿ ಪ್ರಮಾಣ ಇಳಿಕೆ ಬೇಸಿಗೆ ರಜೆ ವೇಳೆ ವಿವಿಧ ದುಡಿಮೆಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳಿಗೆ ದಾಖಲಾಗುವ ಪ್ರಮಾಣ ಕಡಿಮೆಯಾಗುತ್ತದೆ. 2 ತಿಂಗಳ ಬೇಸಿಗೆ ರಜೆಯಲ್ಲಿ ಕೆಲಸ ಕಲಿಯಲೆಂದೋ ಅಥವಾ ಇನ್ಯಾವುದೋ ಆರ್ಥಿಕ ತೊಂದರೆಯಿಂದ ದುಡಿಮೆಗೆ ಹೋಗಿ ಅಲ್ಲಿಯೇ ಜೀವನ ರೂಪಿಸಿಕೊಳ್ಳಲು ಹವಣಿಸುತ್ತಾರೆ. ಇದು ಭವಿಷ್ಯದಲ್ಲಿ ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಶಿಕ್ಷಣ ಇಲಾಖೆ ಆರಂಭಿಸುವ ದಾಖಲಾತಿ ಆಂದೋಲನದ ವೇಳೆ ಇಂಥ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಲು ಚಿಂತನೆ ನಡೆಸಿದೆ.

ಶಿಕ್ಷಾರ್ಹ ಅಪರಾಧ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಂಡಲ್ಲಿ ಅಂತಹವರಿಗೆ ಕನಿಷ್ಠ 6 ತಿಂಗಳು ಹಾಗೂ ಗರಿಷ್ಠ 2 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಯಾವುದೇ ಮಕ್ಕಳನ್ನು ಕೆಲಸಗಳಿಗೆ ನೇಮಿಸಿಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಮತ್ತು ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಕರೆ ಮಾಡುವುದರ ಮೂಲಕ ಮಕ್ಕಳನ್ನು ರಕ್ಷಣೆ ಮಾಡಲು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.