ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಆದರೂ ಬಾಲಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುವುದು ಅಪರಾಧವಾಗಿದ್ದು, ಅಂತಹವರಿಗೆ ಶಿಕ್ಷೆ ಖಚಿತ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ ಜಿ. ಸನದಿ ಹೇಳಿದರು.
ತಾಲೂಕಿನ ಪಿಲ್ಲಗುಂಪೆ ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶದ ಪಿ.ಎನ್.ರಾವ್ ಗಾರ್ಮೆಂಟ್ಸ್ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯಲ್ಲಿ ಆಯೋಜಿಸಿದ್ದ ಬಾಲ ಕಾರ್ಮಿಕ ನಿರ್ಮೂಲನಾ ಅಭಿಯಾನ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವನ್ನು ನಾವೇ ರಚಿಸಿ ಅಧಿಕಾರ ಕೊಟ್ಟಿದ್ದೇವೆ. ಅದರಂತೆ 1986ರಲ್ಲಿ ಬಾಲ ಕಾರ್ಮಿಕ ನಿಷೇಧ ಕಾನೂನು ಜಾರಿ ಮಾಡಲಾಗಿದೆ. ಆದರೂ ಸಹ ಅಲ್ಲಲ್ಲಿ ಬಾಲ ಕಾರ್ಮಿಕರ ಬಳಕೆ ಕಂಡು ಬರುತ್ತಿದ್ದು, ಬಡತನದ ಕಾರಣ ನೀಡುತ್ತಿದ್ದಾರೆ. ಇದು ಸಹ ಅಪರಾಧವಾಗಿದ್ದು, ಬಾಲ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುವವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಕಾನೂನು ಎಷ್ಟೇ ಬಿಗಿಯಾಗಿದ್ದರೂ ಅದರ ವಿರುದ್ಧವಾಗಿ ಘಟನೆಗಳು ನಡೆಯುತ್ತಿವೆ. ಅದನ್ನು ದೇಶದ ಪ್ರತಿಯೊಬ್ಬ ನಾಗರಿಕನು ತಡೆಗಟ್ಟಬೇಕು. ಬಾಲ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅದಕ್ಕಾಗಿಯೇ ಸರ್ಕಾರ 1098 ಸಹಾಯವಾಣಿ ಪ್ರಾರಂಭಿಸಿದ್ದು, ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಜತೆಗೆ ಬಾಲಕಾರ್ಮಿಕರನ್ನು ರಕ್ಷಿಸಲಾಗುವುದು ಎಂದರು.
ಪಿ.ಎನ್.ರಾವ್ ಗಾರ್ಮೆಂಟ್ಸ್ ಮುಖ್ಯಸ್ಥ ನವೀನ್, ವಕೀಲರ ಸಂಘದ ಉಪಾಧ್ಯಕ್ಷ ಕೆ.ನಾಗರಾಜ್, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಜಂಟಿ ಕಾರ್ಯದರ್ಶಿ ಮುನಿರಾಜು, ಖಜಾಂಚಿ ರವಿಕುಮಾರ್ ಇದ್ದರು.