ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಮಾಜದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾರ್ವಜನಿಕರಿಗೆ ಕಾನೂನು ಅರಿವು ಅಗತ್ಯವಿದೆ. ಪ್ರತಿ ಪಾಲಕರು ತಮ್ಮ ಮಕ್ಕಳನ್ನು ದುಡಿಮೆಗೆ ಕಳುಹಿಸದೆ, ಉತ್ತಮ ಶಿಕ್ಷಣ ಪಡೆಯಲು ಕಳುಹಿಸಬೇಕು ಎಂದು ದೇವನಹಳ್ಳಿಯ 5 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಲಕ್ಷ್ಮಣ ರಾಮು ಕುರಣಿ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವಾ ಸಮಿತಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಇಲಾಖೆ ಹಾಗೂ ದೇವನಹಳ್ಳಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2025 ರ ಪ್ರಯುಕ್ತ ’ಕಾನೂನು ಅರಿವು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದಲ್ಲಿ ಮಕ್ಕಳಿಗಾಗಿ ಇರುವ ಕಾಯ್ದೆಗಳು, ಹಕ್ಕುಗಳ ಕುರಿತು ಮಾಹಿತಿ ನೀಡಿದ ಅವರು ಮಕ್ಕಳು ಶಿಕ್ಷಣ ಪಡೆಯುವಾಗ ಅಲಕ್ಷ್ಯ ಮಾಡದೇ, ಶ್ರದ್ಧೆಯಿಂದ ಕಲಿತರೆ ಮಾತ್ರವೇ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು. ಇದಲ್ಲದೆ ಮಕ್ಕಳನ್ನು ಅಪಹರಣ ಮಾಡಿ ಭಿಕ್ಷಾಟನೆಗೆ ಅಥವಾ ಇತರೆ ಚಟುವಟಿಕೆಗಳಾದ ಅಂಗಡಿಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದು, ಇಂತಹ ಘಟನೆಗಳನ್ನು ಸಾರ್ವಜನಿಕರು ಗಮನಿಸಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕರೆ ಮಾಡಿ ಮಾಹಿತಿ ನೀಡಿ ಅಥವಾ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ತಿಳಿಸಿದರು.ಇದು ಪ್ರತಿ ನಾಗರೀಕರ ಕರ್ತವ್ಯವಾಗಿದ್ದು ಈ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಎಲ್ಲರೂ ಕೈಜೋಡಿಸಿದಾಗ ಮಾತ್ರ ಇಂಥ ಅನಿಷ್ಟ ಪದ್ಧತಿಯನ್ನು ನಿಯಂತ್ರಿಸಲು ಸಾಧ್ಯ ಎಂದು ಕರೆ ನೀಡಿದರು.
ಪ್ರತಿಜ್ಞಾ ವಿಧಿ ಬೋಧನೆ: ಈ ವೇಳೆ ದೇವನಹಳ್ಳಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯಕ್ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು ಅಂತಹವರಿಗೆ ಕನಿಷ್ಠ 6 ತಿಂಗಳಿಂದ ಮತ್ತು ಗರಿಷ್ಠ 2 ವರ್ಷದವರೆಗೂ ಜೈಲು ಶಿಕ್ಷೆ ಅಥವಾ 20 ಸಾವಿರ ರೂ. ಗಳಿಂದ 50 ರೂಗಳ ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ತಿಳಿಸಿದರು.
ರಸ ಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ: ಕಾರ್ಯಕ್ರಮದ ವೇದಿಕೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀ ದೊಡ್ಡಬಳ್ಳಾಪುರ ತಾಲೂಕು ಶ್ರೀ ಶಾರದಾ ಪ್ರೌಢಶಾಲೆ ವಿದ್ಯಾರ್ಥಿ ಸಿಂಚನಾ ಪ್ರಥಮ ಬಹುಮಾನ ಸಿಂಚನಾ ಮತ್ತು ಮೌಲ ಪಡೆದುಕೊಂಡರೆ, ದೇವನಹಳ್ಳಿಯ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾಥಿಗಳಾದ ಹಿಂಜಾಮುಲ್ ಮತ್ತು ಜಗದೀಶ್ ದ್ವಿತೀಯ ಬಹುಮಾನ ಹಾಗೂ ನೆಲಮಂಗಲದ ಶ್ರೀನಿವಾಸ ಪ್ರೌಢಶಾಲೆ ವಿದ್ಯಾರ್ಥಿಗಳಾದ ಸಂತೋಷ್ ಮತ್ತು ರುದ್ರೇಶ್ ತೃತೀಯ ಬಹುಮಾನ ಪಡೆದರು. ವೇದಿಕೆಯಲ್ಲಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಶುಭಾಶಯ ಕೋರಿದರು.