ವಿಜಯಪುರ: ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾನೂನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯಡಿ ಅನುಷ್ಟಾನಗೊಳ್ಳುತ್ತಿರುವ ಜಲ ಜೀವನ್ ಮಿಷನ್ ಕಾಮಗಾರಿಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದೇ ಸಾಕ್ಷಿ !
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಹಲವು ಮಕ್ಕಳು ಬಣ್ಣದ ಡಬ್ಬ ಹಾಗೂ ಕುಂಚ ಹಿಡಿದು ಕಾಮಗಾರಿಗೆ ಬಣ್ಣ ಬಳಿಯುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ದಯನೀಯತೆಯನ್ನು ಪ್ರದರ್ಶನಕ್ಕಿಟ್ಟಂತಾಗಿದೆ. ಗ್ರಾಮದ ಬೀದಿ ಬೀದಿಗಳಲ್ಲಿ ಸಂಚರಿಸುತ್ತಾ, ಬೆವರು ಸುರಿಸುತ್ತಾ ಮಕ್ಕಳು ಜೆಜೆಎಂ ಕಾಮಗಾರಿಯ ಸಿಮೇಂಟ್ ಕಂಬಕ್ಕೆ ಬಣ್ಣ ಬಳಿಯುವ ದೃಶ್ಯ ಕರಳು ಹಿಂಡುವಂತಿದೆ.
ಕಳೆದ ಹಲವು ದಿನಗಳಿಂದ ಹಿರೇಮಸಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ಅವೈಜ್ಞಾನಿಕವಾಗಿದ್ದು ಯಾವುದೇ ಕಾರಣಕ್ಕೂ ಪೂರ್ಣಗೊಳ್ಳುವವರೆಗೂ ಹಸ್ತಾಂತರ ಮಾಡಿಕೊಳ್ಳಬಾರದೆಂಬ ಹೋರಾಟ ಚುರುಕುಗೊಂಡಿದೆ. ಸೆ. 8 ರಂದು ನಡೆದ ಗ್ರಾಮ ಸಭೆ ಹಾಗೂ ಸಾಮಾನ್ಯ ಸಭೆಯನ್ನು ಸಹ ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳನ್ನು ಬಳಸಿಕೊಂಡು ಬಣ್ಣ ಬಳಿಯುತ್ತಿರುವ ಫೋಟೊಗಳು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿವೆ.
ಈ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನ ಸೆಳೆಯಲಾಗಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ’ ಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದ್ದಾರೆ.