ದೇವದುರ್ಗ ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ನೌಕರರಿಗೆ ಬಾಲಕಾರ್ಮಿಕ ಪದ್ಧತಿ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ತಾಪಂ ಇಒ ಬಸವರಾಜ ಹಟ್ಟಿ, ಬಾಲಕಾರ್ಮಿಕ ಇಲಾಖೆ ನೋಡಲ್ ಅಧಿಕಾರಿ ನರಸಪ್ಪ, ಚಿಂಚೋಡಿ ಪಿಡಿಒ ಚನ್ನಬಸವ, ಪೂರ್ಣಿಮಾ, ತಾಯಣ್ಣ, ಹನುಮಂತಪ್ಪ ಕಾಕರಗಲ್, ಶಿವಕುಮಾರ, ಬಾಷಾ ಇತರರಿದ್ದರು 
ಜಿಲ್ಲೆ

ಮಕ್ಕಳ ದುಡಿಮೆ ಶಿಕ್ಷಾರ್ಹ ಅಪರಾಧ

ದೇವದುರ್ಗ: ಬಾಲಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿರುವ ಶಾಪವಾಗಿದ್ದು ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಾಪಂ ಇಒ ಬಸವರಾಜ ಹಟ್ಟಿ ಹೇಳಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಗುರುವಾರ ಮಾತನಾಡಿದರು. ಕೃಷಿ ಚಟುವಟಿಕೆಗಳು, ಹೋಟೆಲ್, ಗ್ಯಾರೇಜ್ ಸೇರಿ ವ್ಯಾಪಾರಿ ಮಳಿಗೆಗಳಲ್ಲಿ ಮಕ್ಕಳ ದುಡಿಮೆ ಕಂಡುಬರುತ್ತಿದೆ. ಇಂದು ಬಾಲಕಾರ್ಮಿಕ ಪದ್ಧತಿ ಸ್ವಲ್ಪ ಕಡಿಮೆಯಾಗಿದ್ದರೂ ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಇದು ನಾಗರಿಕ ಸಮಾಜ ತಲೆತಗ್ಗಿಸುವಂಥ ವಿಷಯ.

ಶಿಕ್ಷಣ ಪಡೆಯುವುದು ಪ್ರತಿಮಗುವಿನ ಮೂಲಭೂತ ಹಕ್ಕಾಗಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ದೃಷ್ಟಿಯಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಮಾಡಿದೆ. ಪಾಲಕರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ನಿಮ್ಮ ಸುತ್ತಮುತ್ತ ಯಾವುದೇ ಮಗು, ಬಾಲಕಾರ್ಮಿಕ ಪದ್ಧತಿಗೆ ಒಳಪಟ್ಟಿದ್ದರೆ ನಿರ್ಲಕ್ಷ್ಯ ಮಾಡದೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಹೇಳಿದರು.