ಮಂಡ್ಯ: ಬಾಲಕಾರ್ಮಿಕ ಮಕ್ಕಳ ರಕ್ಷಣೆ ಮಾಡುವುದರ ಜತೆಗೆ ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾಭ್ಯಾಸಕ್ಕೂ ಒತ್ತು ನೀಡಬೇಕು. ಆಗ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಸಮಾಜದಿಂದ ದೂರಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲಕಾರ್ಮಿಕರನ್ನು ಶಾಲೆಗೆ ದಾಖಲು ಮಾಡಿದ ನಂತರ ಅವರ ಶೈಕ್ಷಣಿಕ ಪ್ರಗತಿ ಹಾಗೂ ಹಾಜರಾತಿಯ ಬಗ್ಗೆ ಪ್ರತಿ ಪರಿಶೀಲಿಸಬೇಕು. ಇಲ್ಲವಾದಲ್ಲಿ ಅವರು ಮತ್ತೆ ಶಾಲೆ ಬಿಡುವ ಸಾಧ್ಯತೆ ಇರುತ್ತದೆ ಎಂದರು.
2022-23ನೇ ಸಾಲಿನಲ್ಲಿ 10 ಬಾಲಕಾರ್ಮಿಕರು, 2023-24 ನೇ ಸಾಲಿನಲ್ಲಿ 20 ಹಾಗೂ 2024-25ನೇ ಸಾಲಿನಲ್ಲಿ 6 ಬಾಲ ಕಾರ್ಮಿಕರನ್ನು ಪತ್ತೆ ಮಾಡಿ ಶಾಲೆಗೆ ದಾಖಲು ಮಾಡಲಾಗಿದೆ. ಈ 36 ಮಕ್ಕಳ ಮಾಹಿತಿ ವಿದ್ಯಾರ್ಥಿವಾರು ಶಿಕ್ಷಣ ಇಲಾಖೆಯಲ್ಲಿ ಲಭ್ಯವಿರಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ವಿದ್ಯಾರ್ಥಿಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಕಾರ್ಮಿಕ ಇಲಾಖೆ ಅಧಿಕಾರಿಗಳು ನಗರ ಪ್ರದೇಶದ ಬೇಕರಿ ಹಾಗೂ ಗ್ಯಾರೇಜ್‌ಗಳಲ್ಲಿ ಹೆಚ್ಚು ದಾಳಿ ನಡೆಸುತ್ತಾರೆ. ಕಲ್ಲು ಗಣಿಗಾರಿಕೆ, ಸಣ್ಣ ಕೈಗಾರಿಕೆಗಳು, ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ದಾಳಿ ನಡೆಸಿ. ಜೂ.12ರಂದು ಬಾಲ ಕಾರ್ಮಿಕ ವಿರೋಧಿ ದಿನವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಚರಿಸಿ. ಜಿಲ್ಲೆಯ ಹೋಟೆಲ್ ಮಾಲೀಕರು, ಕ್ವಾರಿ ಮಾಲೀಕರು, ಕಾರ್ಖಾನೆಗಳ ಮುಖ್ಯಸ್ಥರಿಗೆ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಯ ಬಗ್ಗೆ ಕಾರ್ಯಾಗಾರ ಮಾಡಿ ಎಂದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಮಾತನಾಡಿ, ಕಾರ್ಮಿಕ ಇಲಾಖೆ ಅಧಿಕಾರಿಗಳು ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ಹೆಚ್ಚು ದಾಳಿ ನಡೆಸಿ. ಈ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ-2 ಟಿ.ಲಕ್ಷ್ಮೀ, ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಸವಿತಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಮೇಗೌಡ ಇತರರಿದ್ದರು.