ಜಿಲ್ಲೆ

ಶೆಡ್‌ನಿಂದ ಮಗು ಅಪಹರಣ

ಉಡುಪಿ: ನಗರದ ಕರಾವಳಿ ಬೈಪಾಸ್ ಸಮೀಪದ ಶೆಡ್‌ನಲ್ಲಿ ವಾಸವಿದ್ದ ಬಾಗಲಕೋಟೆ ಮೂಲದ ದಂಪತಿಯ ಮಗುವನ್ನು ವ್ಯಕ್ತಿಯೊಬ್ಬ ಅಪಹರಿಸಿರುವ ಘಟನೆ ವರದಿಯಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿಯ ಪುತ್ರ ಶಿವರಾಜ್(2.4 ವರ್ಷ) ಅಪಹರಣಕ್ಕೆ ಒಳಗಾದ ಮಗು. ಭಾರತಿ- ಅರುಣ್‌ಗೆ ಅವಳಿ ಜವಳಿ ಮಕ್ಕಳಿದ್ದು, ಅದರಲ್ಲಿ ಧೀರಜ್ ಎಂಬುವನನ್ನು ಊರಿನಲ್ಲಿ ಬಿಟ್ಟು ಶಿವರಾಜ್ ಜತೆ ಎರಡು ತಿಂಗಳ ಹಿಂದೆ ಉಡುಪಿಗೆ ಬಂದಿದ್ದರು. ಲಾಕ್‌ಡೌನ್ ಸಂದರ್ಭ ಈ ದಂಪತಿ ಮತ್ತು ಮಗು ಸೇರಿದಂತೆ ಹಲವು ಮಂದಿ ವಲಸೆ ಕಾರ್ಮಿಕರು ಕರಾವಳಿ ಬೈಪಾಸ್ ಬಳಿ ಶೆಡ್‌ನಲ್ಲಿ ವಾಸವಿದ್ದರು. ಬಾಗಲಕೋಟೆ ಪರ್ಸು ಎಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬ ಈ ದಂಪತಿಗೆ ಪರಿಚಯವಾಗಿತ್ತು. ಭಾನುವಾರ ಬೆಳಗ್ಗೆ ಚಹಾ ಕುಡಿಸಿ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಆತ ಮಗುವನ್ನು ಕರೆದು ಕೊಂಡು ಹೋಗಿದ್ದಾನೆ. ವಾಪಾಸ್ಸು ಬಾರದೆ ಮಗುವಿನೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ಪಾಲಕರು ದೂರು ನೀಡಿದ್ದಾರೆ.

ಸಿಸಿಟಿವಿಯಲ್ಲಿ ಮಗು ಹೊತ್ತೊಯ್ದ ದೃಶ್ಯ ಪತ್ತೆ: ಅಪಹರಣ ಪ್ರಕರಣ ದಾಖಲಿಸಿದ ನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕರಾವಳಿ ಬೈಪಾಸ್‌ನಲ್ಲಿರುವ ಸಿಸಿಟಿವಿ ದೃಶ್ಯವನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ವ್ಯಕ್ತಿಯೊಬ್ಬ ಮಗುವನ್ನು ಎತ್ತಿಕೊಂಡು ಬರುವ ದೃಶ್ಯ ಮತ್ತು ಕೆಮ್ಮಣ್ಣು ಕಡೆಗೆ ಹೋಗುವ ಬಸ್ಸು ಹತ್ತಿದ್ದಾನೆ. ಪೊಲೀಸರು ಬಸ್‌ನವರಲ್ಲಿ ವಿಚಾರಿಸಿದಾಗ ಆ ವ್ಯಕ್ತಿ ಕುಂದಾಪುರ ಹೋಗುವ ಬಸ್ಸು ಎಂದು ಭಾವಿಸಿ ಈ ಬಸ್ಸನ್ನು ಹತ್ತಿದ್ದ. ನಾವು ಸಂತೆಕಟ್ಟೆಯಲ್ಲಿ ಆತನನ್ನು ಇಳಿಸಿದೆವು ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ. ಪರ್ಸು ಎಂಬ ಅಪರಿಚಿತ ವ್ಯಕ್ತಿ ಕುಂದಾಪುರ ಮೂಲಕ, ಭಟ್ಕಳ ಕಡೆಗೆ ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ವಿವಿಧ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ.