ಮಂಗಳೂರು: ಕುದ್ರೋಳಿ ಹೈದರಾಲಿ ರಸ್ತೆ ನಿವಾಸಿ ಸಲಾಂ ಎಂಬುವರ ಪುತ್ರಿ ಮುಫೀದಾ (11) ಎಂಬಾಕೆಯ ಶವ ಭಾನುವಾರ ನದಿಯಲ್ಲಿ ಪತ್ತೆಯಾಗಿದೆ.
ಮುಫೀದಾ ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದಳು. ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಮನೆ ಸಮೀಪದ ಅಂಗಡಿಯೊಂದರ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಬಾಲಕಿ ನದಿ ಕಡೆಗೆ ಹೋಗಿರುವುದು ಗೊತ್ತಾಗಿದೆ. ನದಿ ಕಿನಾರೆಯಲ್ಲಿ ಹುಡುಕಿದಾಗ ಕುದ್ರೋಳಿ ಕಾರ್ಖಾನೆ ಸಮೀಪದ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಬಾಲಕಿಗೆ ಸ್ವಲ್ಪ ಬುದ್ಧಿ ಭ್ರಮಣೆ ಇದ್ದು, ಈ ಕಾರಣದಿಂದ ಆಕೆಯನ್ನು ಹೆತ್ತವರು ಮನೆಯಲ್ಲಿ ಹೆಚ್ಚು ನಿಗಾ ವಹಿಸಿ ಆರೈಕೆ ಮಾಡುತ್ತಿದ್ದರು. ಆದರೆ ಭಾನುವಾರ ಬೆಳಗ್ಗೆ ಆಕೆ ಹೆತ್ತವರ ಕಣ್ಣು ತಪ್ಪಿಸಿ ನದಿ ಕಡೆ ಹೋಗಿದ್ದಳು. ಈ ಸಂದರ್ಭ ಆಕಸ್ಮಿಕವಾಗಿ ನೀರುಪಾಲಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ವೆನ್‌ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.