ಚನ್ನರಾಯಪಟ್ಟಣ : ಪೋಕ್ಸೋ ಕಾಯ್ದೆ ಬಗ್ಗೆ ಶಿಕ್ಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಮತ್ತು ಕಾಯ್ದೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಕುಸುಮಾ ತಿಳಿಸಿದರು.
ಪಟ್ಟಣದ ರಾಧಾಕೃಷ್ಣ ವಿದ್ಯಾಶಾಲೆಯಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್ ಹಾಗೂ ರಾಧಾಕೃಷ್ಣ ವಿದ್ಯಾ ಶಾಲೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (ಪೋಕ್ಸೋ) ಕಾಯ್ದೆ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪೋಕ್ಸೋ ಕಾಯ್ದೆಯ ತಿಳಿವಳಿಕೆಯಿಲ್ಲದೆ 14 ರಿಂದ 18 ವರ್ಷದೊಳಗಿನವರು ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಮಕ್ಕಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ( ಪೋಕ್ಸೋ) ಕಾಯ್ದೆಯ ಅರಿವು ಅವಶ್ಯಕ. ದೌರ್ಜನ್ಯದ ಎಲ್ಲ ಪ್ರಕರಣಗಳೂ ವರದಿಯಾಗುವುದಿಲ್ಲ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ, ಬಹುಪಾಲು ಪ್ರಕರಣಗಳಲ್ಲಿ ಪಾಲಕರು ಮೌನಕ್ಕೆ ಶರಣಾಗುವುದೇ ಹೆಚ್ಚು. ಪಾಲಕರಲ್ಲೂ ಅರಿವಿನ ಕೊರತೆ ಮತ್ತೊಂದು ಕಾರಣ. ಮಕ್ಕಳಲ್ಲೂ ಅರಿವಿನ ಕೊರತೆ ಇದೆ. ಇಂಥದ್ದೊಂದು ಕಾನೂನು ಜಾರಿಯಲ್ಲಿದೆ ಎಂಬ ಅರಿವೇ ಇಲ್ಲ. ಇಂದಿನ ದಿನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ದೇಶ ಸಾಕಷ್ಟು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಶೋಷಣೆ ಪ್ರಕರಣಗಳು ಮಾತ್ರ ಇನ್ನೂ ನಿಂತಿಲ್ಲ ಎಂದರು.
ಪೋಕ್ಸೋ ಕಾಯ್ದೆ ಬಗ್ಗೆ ಮಕ್ಕಳು, ಪಾಲಕರು, ಶಿಕ್ಷಕರಲ್ಲಿ ಸಮರ್ಪಕವಾಗಿ ಅರಿವಿಲ್ಲದ ಕಾರಣ ಬಹುತೇಕ ಪ್ರಕರಣಗಳು ವರದಿಯೇ ಆಗುವುದಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. 2019ರ ಕಾಯ್ದೆ ತಿದ್ದುಪಡಿಯಿಂದಾಗಿ ಆರೋಪಿಗಳಿಗೆ ದಂಡ ವಿಧಿಸುವುದರ ಜತೆಗೆ 10 ವರ್ಷಕ್ಕಿಂತ ಹೆಚ್ಚು ಕಠಿಣ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಹದಿಹರೆಯದ ಮಕ್ಕಳು ಮಾನಸಿಕವಾಗಿ ತೊಂದರೆಗಳಿಗೆ ಒಳಗಾಗುವುದನ್ನು ತಪ್ಪಿಸಲು ಶಿಕ್ಷಕರು ಸಹ ಮಕ್ಕಳ ಸಮಸ್ಯೆಗಳನ್ನು ಸಂಯಮದಿಂದ ನಿರಂತರವಾಗಿ ಕೇಳುತ್ತಿರಬೇಕು, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹದ ಅಪಾಯಗಳ ಬಗ್ಗೆ ವಿವರಿಸಿ ತಮ್ಮ ಮಕ್ಕಳ ಮೇಲೆ ಗಮನ ಹರಿಸುವಂತೆ ಮನವಿ ಮಾಡಿದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಸುನಿತಾ ಮಾತನಾಡಿ, ಲೈಂಗಿಕ ಅಪರಾಧದಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಸಹ ಬಲಿಪಶು ಆಗಿರುವ ಪ್ರಕರಣಗಳು ಇವೆ. ಆದ್ದರಿಂದ ಈ ಕಾಯ್ದೆಯ ಬಗ್ಗೆ ಗಂಡು/ ಹೆಣ್ಣು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹೆಣ್ಣು ಅಥವಾ ಗಂಡು 18 ವರ್ಷದೊಳಗಿನ ಮಕ್ಕಳನ್ನು ಕಾನೂನು ಮಕ್ಕಳೆಂದೇ ಪರಿಗಣಿಸುತ್ತೇವೆ, ಮಕ್ಕಳ ಲೈಂಗಿಕ ಚಿತ್ರಗಳನ್ನು, ದೃಶ್ಯಗಳನ್ನು ಇಟ್ಟುಕೊಳ್ಳುವುದು, ಮಕ್ಕಳನ್ನು ಲೈಂಗಿಕ ದೃಷ್ಟಿ ಯಿಂದ ನೋಡುವುದು, ಅಶ್ಲೀಲ ಚಿತ್ರಗಳನ್ನು, ವಾಕ್ಯಗಳನ್ನು ಮಕ್ಕಳಿಗೆ ತೋರಿಸುವುದು, ಅವರೊಂದಿಗೆ ಅಶ್ಲೀಲವಾಗಿ ಮಾತನಾಡುವುದು ಅಪರಾಧವಾಗುತ್ತದೆ. ರಸ್ತೆ ಬದಿಯಲ್ಲಿ ಹೋಗುವ ಸಂದರ್ಭದಲ್ಲಿ ಯಾರಾದರೂ ಯಾವುದೇ ವ್ಯಕ್ತಿಯನ್ನು ರೇಗಿಸುವುದು, ಕಾಟ ಕೊಡುವುದು, ಹಿಂದೆ ಸುತ್ತಾಡುವುದು ಕಂಡುಬಂದಲ್ಲಿ ಪಾಲಕರಿಗೆ ಅಥವಾ ಚೈಲ್ಡ್ ಹೆಲ್ಪ್‌ಲೈನ್ 1098 ಗೆ ತಕ್ಷಣ ಕರೆ ಮಾಡಿ ಮಾಹಿತಿ ತಿಳಿಸಬೇಕು. ಆಗ ತಕ್ಷಣ ಪ್ರಾಧಿಕಾರಗಳು ತುರ್ತು ಕ್ರಮಕ್ಕೆ ಮುಂದಾಗಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತವೆ ಎಂದರು.
ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಎರಡೂ ಬೇರೆ. ಎರಡಕ್ಕೂ ಸಹ ವ್ಯತ್ಯಾಸ ಇದೆ. ಕಾಯ್ದೆಯಲ್ಲಿ ಪ್ರತಿಯೊಂದಕ್ಕೂ ಶಿಕ್ಷೆ ಇದೆ. ಫೇಸ್‌ಬುಕ್, ಇನ್‌ಸ್ಟ್ಟಾಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ನೇಹಿತರಾಗಿ ತಮ್ಮ ವೈಯಕ್ತಿಕ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಹಣದ ಬೇಡಿಕೆ ಇಟ್ಟಾಗ ಮನೆಯಲ್ಲಿ ವಿಷಯ ತಿಳಿಸುವ ಧೈರ್ಯ ಮಾಡದೆ ಆತ್ಮಹತ್ಯೆಗೆ ಒಳಗಾಗಿರುವ ಉದಾಹರಣೆಗಳಿವೆ. ಮಕ್ಕಳು ತಮ್ಮ ಮೇಲೆ ಲೈಂಗಿಕ ಕಿರುಕುಳವಾಗುತ್ತಿದೆ ಎನ್ನಿಸಿದಾಗ ಅದನ್ನು ವಿರೋಧಿಸಬೇಕು. ಶಿಕ್ಷಕರು ಹಾಗೂ ಪಾಲಕರಿಗೆ ತಿಳಿಸಿ ರಕ್ಷಣೆ ಪಡೆದುಕೊಳ್ಳಬೇಕು. ಮನೆಯಲ್ಲಿ ವಿಷಯ ತಿಳಿಸಲು ಎದರಿ ನೋವನ್ನು ಅನುಭವಿಸಬಾರದು ಎಂದರು.
ಮಕ್ಕಳ ಮೇಲೆ ನಡೆಯುವ ಲೈಂಗಿಕ ಅಪರಾಧಗಳನ್ನು, ಶೋಷಣೆಗಳನ್ನು ಮತ್ತು ಅತ್ಯಾಚಾರಗಳನ್ನು ಪರಿಣಾಮಕಾರಿಯಾಗಿ ತಡೆಯುವುದು ಮತ್ತು ಮಕ್ಕಳನ್ನು ಅಂಥ ಶೋಷಣೆಗೆ ಗುರಿಪಡಿಸಿದವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸುವುದು. ಆ ಮೂಲಕ ಮಕ್ಕಳಿಗೆ ಅಂತಹ ಅಪರಾಧಗಳಿಂದ ರಕ್ಷಣೆ ಕೊಡುವುದು ಈ ಕಾಯ್ದೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್ ಅಧ್ಯಕ್ಷ ಎನ್.ಬಿ. ಜ್ಯೋತಿ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮಗಳ ಮೇಲೆ ಆಕರ್ಷಿಸುವುದನ್ನು ಬಿಟ್ಟು ನಿಮ್ಮ ಶೈಕ್ಷಣಿಕ ಗುರಿಯ ಕಡೆಗೆ ಸಾಗಬೇಕು. ಸಂಯಮ ಕಾಪಾಡಿಕೊಳ್ಳಬೇಕು. ಈ ವಯಸ್ಸಿನಲ್ಲಿ ಶಿಕ್ಷಣದ ಬಗ್ಗೆ ಮಾತ್ರ ನಿಗವಹಿಸುವುದು ನಿಮ್ಮ ಭವಿಷ್ಯಕ್ಕೆ ತುಂಬ ಒಳ್ಳೆಯದು. ರೋಟರಿ ಕ್ಲಬ್ ಇಂತಹ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ವಿವಿಧ ಶಾಲೆಗಳನ್ನು ಆಯ್ಕೆ ಮಾಡಿ, ಶಾಲೆಗೆ ಭೇಟಿ ನೀಡಿವುದರ ಮೂಲಕ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ, ಕಾನೂನು ಅರಿವು- ನೆರವುಗಳ ಬಗ್ಗೆ ಮಕ್ಕಳಿಗೆ ತಿಳಿಸಲಾಗುತ್ತಿದೆ. ಮಕ್ಕಳು ಕಾನೂನುಗಳ ಬಗ್ಗೆ ತಿಳಿದುಕೊಂಡು ತಮ್ಮ ಸಹಪಾಠಿಗಳಿಗೆ ಹಾಗೂ ನೆರೆಹೊರೆಯ ಮಕ್ಕಳಿಗೆ ತಿಳಿಸಿ ಕೊಡಬೇಕೆಂದು ಮನವಿ ಮಾಡಿದರು.
ರಾಧಾಕೃಷ್ಣ ವಿದ್ಯಾಶಾಲೆ ಪ್ರಾಂಶುಪಾಲ ಎಸ್.ಕಾರ್ತಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ಹರೀಶ್, ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್ ಕಾರ್ಯದರ್ಶಿ ಎ.ಆರ್. ಹೇಮಚಂದ್ರ, ಖಜಾಂಚಿ ಬಿ.ಕೆ.ವೆಂಕಟೇಶ್, ಸದಸ್ಯರಾದ ಎಚ್.ಎನ್.ಪದ್ಮನಾಭ, ಎಚ್.ಎನ್. ಹೇಮಲತಾ, ಶಿವನಂಜೇಗೌಡ, ಬಿ.ಪಿ.ಹರೀಶ್, ರಂಗನಾಥ್, ಗಣೇಶ್, ಪುಟ್ಟರಾಜು, ಕಾನೂನು ಇಲಾಖೆಯ ಸಿಬ್ಬಂದಿ ಭಗವಾನ್ ಸೇರಿದಂತೆ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.