ಜಿಲ್ಲೆ

ಬುಲೆರೋ- ಬೈಕ್ ಡಿಕ್ಕಿಯಾಗಿ ಸವಾರನಿಗೆ ಗಾಯ

ಜಗಳೂರು: ತಾಲೂಕಿನ ಚಿಕ್ಕಮಲ್ಲನಹೊಳೆ- ತೊರೆಕೋಲಮ್ಮನಹಳ್ಳಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಬುಲೆರೋ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್​ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಚಿಕ್ಕಮಲ್ಲನಹೊಳೆ ಗ್ರಾಮದ ಮಾರುತಿ ಗಾಯಗೊಂಡ ವ್ಯಕ್ತಿ. ಬೈಕ್ ಸವಾರ ಚಿಕ್ಕಮಲ್ಲನಹೊಳೆ ಗ್ರಾಮಕ್ಕೆ ಬರುತ್ತಿದ್ದನು. ದಾವಣಗೆರೆಯಲ್ಲಿ ಬಾಳೆಕಾಯಿ ಲೋಡ್ ಇಳಿಸಿ ಆಂಧ್ರಕ್ಕೆ ಹೊರಟಿದ್ದ ಕಲ್ಯಾಣದುರ್ಗದ ಬುಲೆರೋ, ಚಾಲಕನ ನಿಯಂತ್ರಣ ತಪ್ಪಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರನ ಕಾಲು ಮುರಿದು, ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಜಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರ ಮೂಲದ ಬುಲೆರೋ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಸಿಡಿದ ಆಂಬುಲೆನ್ಸ್ ಚಕ್ರ: ಗಾಯಾಳುವನ್ನು ನಾಯಕನಹಟ್ಟಿ ಆಸ್ಪತ್ರೆಯ ಆಂಬುಲೆನ್ಸ್​ನಲ್ಲಿ ಜಗಳೂರಿಗೆ ಸಾಗಿಸುವಾಗ ದಿಬ್ಬದಹಟ್ಟಿ ಬಳಿ ಮುಂದಿನ ಚಕ್ರ ಸಿಡಿದಿದ್ದು, ಚಾಲಕನ ಜಾಗರೂಕತೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಾಯಾಳು ನರಳುತ್ತಿದ್ದಾಗ ಕೂಡಲೇ ಸಿ.ಎಂ ಹೊಳೆ ಯುವಕರು ದೌಡಾಯಿಸಿ ಜಾಕ್ ಸಹಾಯದಿಂದ ಚಕ್ರ ಬದಲಿಸಿ ಜಗಳೂರಿಗೆ ಕಳಿಸುವಲ್ಲಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಘಟನಾ ಸ್ಥಳದಲ್ಲಿ ಗ್ರಾಪಂ ಸದಸ್ಯ ರಂಗಪ್ಪ ಶಿವಣ್ಣ, ಮುಖಂಡರಾದ ಕಜ್ಜಿ ಹನುಮಂತಪ್ಪ, ಮಹೇಶ್, ಎಚ್. ತಿಪ್ಪೇಸ್ವಾಮಿ, ಮೈಲಾರಿ, ರಂಗಣ್ಣ ಮತ್ತಿತರರಿದ್ದರು.