ಜಿಲ್ಲೆ

ಮನೆ ಬಿದ್ದು ಎರೆಡು ವರ್ಷವಾದ್ರೂ ಇಲ್ಲ ಪುನರ್ವಸತಿ; ಚಿಕ್ಕಮಲ್ಲನಹೊಳೆ ವೃದ್ಧೆ ಗೋಳು, ತಹಸೀಲ್ದಾರ್ ಎದರು ಅಳಲು

ಜಗಳೂರು: ಕಳೆದ ಎರಡು ವರ್ಷದ ಹಿಂದಿನ ಮಳೆಗಾದಲ್ಲಿ ಮನೆ ಬಿದ್ದಿದೆ ಇನ್ನೂ ಪರಿಹಾರವೂ ಇಲ್ಲ. ಯಾವುದೇ ಯೋಜನೆಯಲ್ಲಿ ಹೊಸ ಮನೆಯನ್ನ ಮಂಜೂರು ಮಾಡಲಿಲ್ಲ ಸ್ವಾಮಿ. ಈಗಲೂ ಹಾಗೇ ಮುರುಕಲು ಮನೆಯಲ್ಲಿ ಚಳಿ-ಗಾಳಿಯಲ್ಲೇ ಕಾಲ ನೂಕುತ್ತಿದ್ದೇನೆ.

ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ವೃದ್ಧೆ ಗೌರಮ್ಮ ತಹಸೀಲ್ದಾರ್ ಸಂತೋಷ್ ಕುಮಾರ್ ಬಳಿ ಅಲವತ್ತು ಕೊಂಡಿದ್ದು ಹಿಗೆ.

ವಸತಿ ರಹಿತರಿಗೆಂದು ಸರ್ಕಾರ ವಿವಿಧ ಯೋಜನೆಗಳಡಿ ಗ್ರಾಮ ಪಂಚಾಯಿತಿಗೆ ಮನೆ ಹಂಚಿಕೆ ಮಾಡಿದೆಯಂತೆ. ಆದರೆ, ಅದರಲ್ಲಿ ಒಂದು ಮನೆಯೂ ನನಗೆ ದಕ್ಕಿಲ್ಲ. ಗ್ರಾಪಂ ಅಧಿಕಾರಿಗಳ ಬಳಿ ಅಲೆದು ಅಲೆದು ಸಾಕಾಗಿದೆ. ಈ ವಯಸ್ಸಿನಲ್ಲಿ ಬೆಚ್ಚಗಿರಲು ನೀವಾದರೂ ಒಂದು ಸೂರು ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ ಎಂದು ತಹಸೀಲ್ದಾರ್ ಅವರಲ್ಲಿ ಮೊರೆಯಿಟ್ಟಳು ವೃದ್ಧೆ ಗೌರಮ್ಮ.

ಕಳೆದ ಎರಡು ವರ್ಷಗಳ ಹಿಂದೆ ಸುರಿದ ಮಳೆಯಲ್ಲಿ ಮನೆ ಮುರಿದು ಬಿದ್ದಿದೆ. ಈ ಭಾಗದ ಚುನಾಯಿತ ಪ್ರತಿನಿಧಿಗಳಾಗಲಿ ಅಥವಾ ಗ್ರಾಪಂ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸಿಲ್ಲ. ನಿರ್ಲಕ್ಷೃ ತೋರಿದ್ದಾರೆ ಎಂದು ಆರೋಪಿಸಿದರು.

ಹಿರೇಮಲ್ಲನಹೊಳೆ ಗ್ರಾಪಂ ವ್ಯಾಪ್ತಿಯ ಚಿಕ್ಕಮಲ್ಲನಹೊಳೆ ದೊಡ್ಡ ಗ್ರಾಮ. ಪ್ರತಿ ವರ್ಷ ನೂರಾರು ಮನೆಗಳು ಮಂಜೂರಾದರೂ ಬಡ ವೃದ್ಧೆಗೆ ಮನೆ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ. ಉಳ್ಳವರ ಪಾಲಾಗುತ್ತಿವೆ ಎಂಬ ಆರೋಪಕ್ಕೆ ಇದು ಕೈಗನ್ನಡಿ.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಿರಂಜೀವಿ ವೃದ್ಧೆ ಪರಿಸ್ಥಿತಿ ಬಗ್ಗೆ ತಹಸೀಲ್ದಾರ್ ಸಂತೋಷ್ ಕುಮಾರ್ ಅವರ ಗಮನಕ್ಕೆ ತಂದಿದ್ದು, ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ತಹಸೀಲ್ದಾರ್ ವಸತಿ ಕಲ್ಪಿಸುವ ಭರವಸೆ ನೀಡಿದ್ದಾರೆ.

ಮನೆ ಕುಸಿದು ಬಿದ್ದು ವರ್ಷಗಳೇ ಆಗಿವೆ. ಹಾಗಾಗಿ ಕಂದಾಯ ಇಲಾಖೆಯಿಂದ ಪರಿಹಾರ ಕೊಡಲು ಸಾಧ್ಯವಾಗುವುದಿಲ್ಲ. ಗ್ರಾಪಂ ಮೂಲಕ ಹೊಸ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಭಯ ಬೇಡ. ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ. ಸಂತೋಷ್‌ಕುಮಾರ್, ತಹಸೀಲ್ದಾರ್. ಬಡವರು, ನಿರ್ಗತಿಕರು, ವಸತಿ ರಹಿತರನ್ನು ಗುರುತಿಸಿ ಮನೆ ನೀಡಬೇಕಾದ ಅಧಿಕಾರಿಗಳು ಉಳ್ಳವರಿಗೆ ಮನೆ ನೀಡುತ್ತಿರುವುದು ಯಾವ ನ್ಯಾಯ? ವೃದ್ಧೆ ಗೌರಮ್ಮ ಕಳೆದೆರಡು ವರ್ಷಗಳಿಂದಲೂ ಗ್ರಾಮ ಪಂಚಾಯಿತಿಗೆ ಅಲೆಯುತ್ತ ಅಧಿಕಾರಿಗಳಿಗೆ ಅರ್ಜಿ ಕೊಡುತ್ತಲೇ ಇದ್ದಾರೆ. ಈ ಮಳೆಗಾಲದಲ್ಲೂ ಮುರುಕಲು ಮನೆಯಲ್ಲಿ ನೆಲೆಸಿದ್ದಾರೆ. ಸ್ವಾತಂತ್ರೊೃೀತ್ಸವದ ಅಮೃತಮಹೋತ್ಸವ ಸಂಭ್ರಮ ಎಂದರೆ ಇದೆಯೇ? ಚಿರಂಜೀವಿ, ಹೋರಾಟಗಾರ, ರೈತ ಸಂಘ.

ಚಿಕ್ಕಮಲ್ಲನಹೊಳೆ, ವಸತಿ, ತಹಸೀಲ್ದಾರ್, ವೃದ್ಧೆ ಗೌರಮ್ಮ,