ಲೋಕಾಪುರ ಸಮೀಪದ ಚಿಕ್ಕೂರ ಪುನರ್ವಸತಿ ಕೇಂದ್ರದಲ್ಲಿ ಕಳಪೆ ಕಾಮಗಾರಿ ತೋರಿಸುತ್ತಿರುವ ಗ್ರಾಮಸ್ಥರು. ವೈ.ಜಿ.ದಾಸರಡ್ಡಿ, ವೆಂಕಣ್ಣ ಕಳ್ಳಿಗುದ್ಡಿ, ಸುರೇಶ ಪಾಟೀಲ, ಕೃಷ್ಣಪ್ಪ ದಾಸನಗೌಡರ, ಪಾಂಡು ದಾಸರಡ್ಡಿ, ಚನ್ನಮಲ್ಲಯ್ಯ ಹಿರೇಮಠ, ಸಂಜು ದಾಸರಡ್ಡಿ, ರಮೇಶ ಕೋರಡ್ಡಿ ಇದ್ದರು. 
ಜಿಲ್ಲೆ

ಕಳಪೆ ಕಾಮಗಾರಿ ನಿಲ್ಲಿಸಲು ಚಿಕ್ಕೂರ ಗ್ರಾಮಸ್ಥರ ಒತ್ತಾಯ

ದತ್ತಾತ್ರೇಯ ಪಿ ಕುಲಕರ್ಣಿ

ಲೋಕಾಪುರ: ಸಮೀಪದ ಚಿಕ್ಕೂರ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಒಳಚರಂಡಿ ಮತ್ತು ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಅವುಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಚಿಕ್ಕೂರ ಗ್ರಾಮಸ್ಥರು ಸೋಮವಾರ ಒತ್ತಾಯಿಸಿದರು.

ಗ್ರಾಮದ ಹಿರಿಯ ಮುಖಂಡ ವೈ.ಜಿ.ದಾಸರಡ್ಡಿ ಮಾತನಾಡಿ, ಚಿಕ್ಕೂರ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಗುತ್ತಿಗೆದಾರ ಯೋಜನೆ ಪ್ರಕಾರ ನಿರ್ವಹಿಸದೆ ಮನಸ್ಸಿಗೆ ಬಂದಂತೆ ಮಾಡಿದ್ದು, ಸಂಪೂರ್ಣ ಕಳೆಪೆಯಾಗಿದೆ. ಇದಕ್ಕೆ ನಮ್ಮೆಲ್ಲರ ವಿರೋಧವಿದ್ದು ತಕ್ಷಣ ಜಿಲ್ಲಾಧಿಕಾರಿ ಹಾಗೂ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಬೇಕೆಂದು ಒತ್ತಾಯಿಸಿದರು.

ಗ್ರಾಮದ ಮುಖಂಡ ವೆಂಕಣ್ಣ ಕಳ್ಳಿಗುದ್ದಿ ಮಾತನಾಡಿ, ರಸ್ತೆಗೆ ಗರಸನ್ನು ಸರಿಯಾಗಿ ಹಾಕುತ್ತಿಲ್ಲ. ಒಳಚರಂಡಿ ಕೆಳಗೆ ಸರಿಯಾಗಿ ಮೆಟ್ಲಿಂಗ್ ಮತ್ತು ಮೋರಂ ಹಾಕದೆ ಕಾಮಗಾರಿ ಮಾಡಲಾಗುತ್ತಿದೆ. ಸರಿಯಾಗಿ ಕ್ಯೂರಿಂಗ್ ಮಾಡುತ್ತಿಲ್ಲದ ಕಾರಣ ಬಹಳ ದಿವಸ ತಾಳಿಕೆ ಬರುವುದಿಲ್ಲ. ಅದಕ್ಕೆ ಕಾಮಗಾರಿಯನ್ನು ನಿಲ್ಲಿಸಿ ಉತ್ತಮ ಗುಣಮಟ್ಟದ ಕೆಲಸ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಗ್ರಾಮಸ್ಥರಾದ ಸುರೇಶ ಪಾಟೀಲ, ಕೃಷ್ಣಪ್ಪ ದಾಸನಗೌಡರ, ಪಾಂಡು ದಾಸರಡ್ಡಿ, ಚನ್ನಮಲ್ಲಯ್ಯ ಹಿರೇಮಠ, ಸಂಜು ದಾಸರಡ್ಡಿ, ರಮೇಶ ಕೋರಡ್ಡಿ ಇತರರಿದ್ದರು.