ಜಿಲ್ಲೆ

ಚಿಕ್ಕಾಂಶಿಹೊಸೂರ ಸೊಸೈಟಿ ಚುನಾವಣೆ: 7 ಕಾಂಗ್ರೆಸ್, 5 ಬಿಜೆಪಿ ಬೆಂಬಲಿತರಿಗೆ ಗೆಲುವು

ಹಾನಗಲ್ಲ: ತಾಲೂಕಿನಲ್ಲಿ ಭಾರಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚಿಕ್ಕಾಂಶಿ ಹೊಸೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 7 ಅಭ್ಯರ್ಥಿಗಳು ಗೆದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಒಟ್ಟು 12 ನಿರ್ದೇಶಕರ ಸ್ಥಾನವನ್ನು ಹೊಂದಿರುವ ಚಿಕ್ಕಾಂಶಿ ಹೊಸೂರ ಸೊಸೈಟಿ ಆರಂಭದಿಂದಲೂ ಬಿಜೆಪಿ ಬೆಂಬಲಿತರೇ ಅಧ್ಯಕ್ಷರಾಗಿದ್ದರು. ಆದರೆ, ಸೋಮವಾರ ಹಮ್ಮಿಕೊಂಡ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 7 ಅಭ್ಯರ್ಥಿಗಳ ಗೆಲುವಿನೊಂದಿಗೆ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ. ಬಿಜೆಪಿ ಬೆಂಬಲಿತ ಐವರು ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದರು.

ಕಾಂಗ್ರೆಸ್ ಬೆಂಬಲಿತರಾದ ಮಲ್ಲಿಕಾರ್ಜುನಗೌಡ ಪಾಟೀಲ, ವೀರಭದ್ರಗೌಡ ಪಾಟೀಲ, ಚನ್ನಬಸಪ್ಪ ಹರವಿ, ನಾಗರಾಜ ಪಾಟೀಲ, ಹುಸೇನಮಿಯಾ ಬಿಳಗಲಿ, ಲೀಲಾವತಿ ಈಳಿಗೇರ, ಬಸಪ್ಪ ವಡ್ಡರ, ಬಿಜೆಪಿ ಬೆಂಬಲಿತರಾದ ಸಿದ್ಧನಗೌಡ ಪಾಟೀಲ, ಶಿವಕುಮಾರ ಗೌಡ ಪಾಟೀಲ, ಶಶಿಕಲಾ ಹಿರೇಕಾಂಶಿ, ವಿನೋದ ಪಾಟೀಲ ಮತ್ತು ಬಸವಣ್ಣೆಪ್ಪ ಪುರ್ಲಿ ಗೆಲುವು ಸಾಧಿಸಿದರು.

ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಏರ್ಪಡಿಸಿದ್ದ ಮತದಾನ ಪ್ರಕ್ರಿಯೆಯಲ್ಲಿ ಸದಸ್ಯರು ಉತ್ಸಾಹದಿಂದಲೇ ಪಾಲ್ಗೊಂಡು ಮತದಾನ ಮಾಡಿದರು. ಶೇ. 95ರಷ್ಟು ಮತದಾನವಾಗಿತ್ತು. ಚುನಾವಣಾಧಿಕಾರಿಯಾಗಿ ವಿ.ಎಸ್. ಹರವಿ ಕಾರ್ಯ ನಿರ್ವಹಿಸಿದರು. ಮತ ಎಣಿಕೆ ನಂತರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.