ಜಿಲ್ಲೆ

ಚಿಕ್ಕನರಗುಂದ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ರವಿ ಎಸ್. ಬಳೂಟಗಿ

ನರಗುಂದ: ತಾಲೂಕಿನ ಚಿಕ್ಕನರಗುಂದ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರ ಕೂಲಿಹಣ ಪಾವತಿಸುವಂತೆ ಆಗ್ರಹಿಸಿ ನೂರಾರು ಕಾರ್ಮಿಕರು ಗುರುವಾರ ಚಿಕ್ಕನರಗುಂದ ಗ್ರಾಪಂ ಅಧಿಕಾರಿಗಳನ್ನು ಹೊರಹಾಕಿ, ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ನರೇಗಾ ಯೋಜನೆಯಡಿ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ 2024- 25ನೇ ಸಾಲಿನಲ್ಲಿ ಕೈಗೊಂಡ ಬದುವು ನಿರ್ಮಾಣ ಕಾಮಗಾರಿಯಲ್ಲಿ ನೂರಾರು ಕಾರ್ಮಿಕರು ದುಡಿದಿದ್ದಾರೆ. ಆದರೆ, ನಿಗದಿತ ಅವಧಿಯಲ್ಲಿ ಕಾರ್ಮಿಕರ ಕೂಲಿ ಮೊತ್ತವನ್ನು ಪಾವತಿಸದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್.ಕೆ. ಅರಳಿಕಟ್ಟಿ ಅವರು ಸಲ್ಲದ ನೆಪವೊಡ್ಡಿ ಆರೇಳು ತಿಂಗಳಿನಿಂದ ಕಚೇರಿಗೆ ಅಲೆಯುವಂತೆ ಮಾಡಿದ್ದಾರೆ. ಕೂಲಿಕಾರ್ಮಿಕರ ಕೂಲಿ ಹಣ ಪಾವತಿಸಲು ವಿಳಂಬ ಮಾಡಿರುವ ಪಿಡಿಒ, ಎನ್‌ಆರ್‌ಇಜಿ ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಿಡಿಒ ಬೇಜವಾಬ್ದಾರಿಯಿಂದಲೇ ಬಡವರಿಗೆ ಕೂಲಿ ಹಣ ಸಿಕ್ಕಿಲ್ಲ. ಗಣೇಶ ಚತುರ್ಥಿ ಹಬ್ಬದಲ್ಲಿ ಕುಟುಂಬದ ಆರ್ಥಿಕ ನಿರ್ವಹಣೆ ಬಹಳ ಕಷ್ಟವಾಗಿದೆ. ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಹಣವಿಲ್ಲದಂತಾಗಿದೆ. ಬಡ ಕೂಲಿಕಾರ್ಮಿಕರ ಆಸೆಗೆ ತಣ್ಣೀರು ಎರಚಿರುವ ಪಿಡಿಒ ಅವರನ್ನು ಅಮಾನತುಗೊಳಿಸಿ, ಬಾಕಿ ಉಳಿದ ಕೂಲಿ ಮೊತ್ತ ಪಾವತಿಸಬೇಕು. ಇಲ್ಲದಿದ್ದರೆ ನರಗುಂದ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕೂಲಿಕಾರರು ಎನ್‌ಆರ್‌ಇಜಿ ಯೋಜನೆ ಸಹಾಯಕ ನಿರ್ದೇಶಕ ಸಂತೋಷ ಪಾಟೀಲ ಅವರಿಗೆ ಲಿಖಿತ ಮನವಿ ನೀಡಿದರು.
ಸಂತೋಷ ಪಾಟೀಲ ಮಾತನಾಡಿ, ಪ್ರಮಾದಗಳ ಬಗ್ಗೆ ತನಿಖೆ ಕೈಗೊಳ್ಳುವಂತೆ ಜಿಪಂ ಇಒಗೆ ಮನವಿ ಮಾಡುವುದರ ಜತೆಗೆ ಪ್ರತಿಯೊಬ್ಬರ ಕೂಲಿಹಣ ಪಾವತಿಸುವುದರ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವ ಎಂದು ಭರವಸೆ ನೀಡಿದ್ದರಿಂದ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.
ಶಿವರಾಜ ಹೂಲಿ, ಬಸವರಾಜ ತೊರಗಲ್, ಅಪ್ಪಣ್ಣ ಕುರಿ, ಶಿವಪ್ಪ ಸಾತಣ್ಣವರ, ಶ್ರೀಶೈಲ ತೊರಗಲ್, ದೇವಪ್ಪ ಚಲವಾದಿ, ಭೀರಪ್ಪ ಹಳೇಮನಿ, ಮಲ್ಲಪ್ಪ ತಡಹಾಳ, ಮಂಜುನಾಥ ಹೊಸಗಾಣಿಗೇರ, ಸಿದ್ಧಪ್ಪ ಹೂಗಾರ, ಶ್ರೀಕಾಂತ ಕೋನಣ್ಣವರ, ಬಸವರಾಜ ಸುಳ್ಳದ, ಎಸ್.ಡಿ.ಬುಳ್ಳನ್ನವರ, ಶಿವಾನಂದ ಹಳಕಟ್ಟಿ ಇದ್ದರು.