ಎನ್.ಆರ್.ಪುರ ತಾಲೂಕಿನ ಆಲ್ದಾರ, ಬೈರಾಪುರ, ಮರಾಠಿಕ್ಯಾಂಪ್, ಮಾರಿದಿಬ್ಬಗಳಿಗೆ ಶಾಶ್ವತ ಕುಡಿಯುವ ನೀರೊದಗಿಸಬಹುದಾದ ಭದ್ರಾ ಹಿನ್ನೀರಿನ ದೃಶ್ಯ. 
ಚಿಕ್ಕಮಗಳೂರು

ಹಿನ್ನೀರಿದ್ದರೂ ಕುಡಿಯಲು ನೀರಿಲ್ಲ (Bhadra backwaters)

(Bhadra backwaters

ಎನ್.ಆರ್.ಪುರ: ಸಮುದ್ರದ ನೆಂಟಸ್ಥಿಕೆ ಉಪ್ಪಿಗೆ ಬರಗಾಲ ಎಂಬಂತಾಗಿದೆ ತಾಲೂಕಿನ ಬೈರಾಪುರ ಗ್ರಾಮದ ಜನರ ಗೋಳು. ಸಮೀಪದಲ್ಲೇ ಭದ್ರಾ ಹಿನ್ನೀರಿದ್ದರೂ ಬೇಸಿಗೆಯಲ್ಲಿ ಕುಡಿಯಲು ಹಾಗೂ ಜಾನುವಾರುಗಳಿಗೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.

ಇದಕ್ಕೆ ಶಾಶ್ವತವಾದ ಯೋಜನೆ ರೂಪಿಸಿ ನೀರಿನ ಬವಣೆ ತಪ್ಪಿಸಬೇಕೆಂಬುದು ಆಲ್ದಾರ, ಬೈರಾಪುರ, ಮರಾಠಿಕ್ಯಾಂಪ್, ಮಾರಿದಿಬ್ಬ ಗ್ರಾಮಸ್ಥರ ಆಗ್ರಹ. ಇದಕ್ಕಾಗಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಬೈರಾಪುರ ಗ್ರಾಮಕ್ಕೆ ಭದ್ರಾ ಹಿನ್ನೀರನ್ನು ಬಳಸಿಕೊಂಡು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಸ್ಥಳೀಯರು ಸಭೆ ಸೇರಿ ನೀರಿನ ಸಮಸ್ಯೆ, ಹಿನ್ನೀರು ಬಳಕೆಯ ಸಾಧ್ಯತೆ ಹಾಗೂ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ನೀರಿನ ಮೂಲವಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸ. ಬೈರಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಭದ್ರಾ ಹಿನ್ನೀರನ್ನು ಬಳಸಿಕೊಳ್ಳುವ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೇವಲ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ತಾತ್ಕಾಲಿಕ ವ್ಯವಸ್ಥೆಗಿಂತ, ಮುಂದಿನ ಹಲವು ವಷರ್ಗಳ ಅಗತ್ಯತೆ ಗಮನದಲ್ಲಿಟ್ಟುಕೊಂಡು ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವ ಅಗತ್ಯವಿದೆ.