ತರೀಕೆರೆ: ಕನ್ನಡ ನಮ್ಮೆಲ್ಲರ ಅಸ್ಮಿತೆ. ನಾಡಿನ ಸಾಹಿತ್ಯ, ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಸುದೀರ್ಘ ಇತಿಹಾಸ ಹೊಂದಿರುವ ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ದಾಸರು, ಶರಣರು, ಕವಿಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಸಹನಾ ಹೇಳಿದರು.
ಮಮತಾ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಸುಂದರವಾದ ಕನ್ನಡ ಭಾಷೆಯನ್ನು ಬಳಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕು ಎಂದರು.
ಮಮತಾ ಮಹಿಳಾ ಸಮಾಜ ಸುವರ್ಣ ಮಹೋತ್ಸವ ಸಂಭ್ರಮ ಪೂರೈಸಿದ್ದು, ಜನೋಪಯೋಗಿ ಕಾರ್ಯದಲ್ಲಿ ತೊಡಗಿದೆ. ವಿವಿಧೆಡೆಯ ಆರ್ಥಿಕ ನೆರವಿನಿಂದ ಅರಿವು, ಆರೋಗ್ಯ ಶಿಬಿರ, ಆಹಾರ ಮೇಳ, ರಸಪ್ರಶ್ನೆ, ಸ್ವಚ್ಛತೆ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಶಿವಮೊಗ್ಗ ತಾಯಿಮನೆ ಅನಾಥಾಶ್ರಮ ಹಾಗೂ ಸೈನಿಕರ ಕಲ್ಯಾಣ ನಿಧಿಗೆ ಪ್ರತಿ ವರ್ಷ ದೇಣಿಗೆ ನೀಡುತ್ತಿದೆ ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಸಮಾರಂಭ ನಿಮಿತ್ತ ಆಯೋಜಿಸಿದ್ದ ಗೀತ ಗಾಯನ ಕಾರ್ಯಕ್ರಮದಲ್ಲಿ ಶಿವಮೊಗ್ಗ ಗಾಯಕ ಪೃಥ್ವಿ ಗೌಡ ಹಾಗೂ ಗಾಯಕಿ ಸುಪ್ರಜಾ ಕಾಮತ್ ಅವರು ನಾಡು, ನುಡಿ, ಜಲ ಸಂಬಂಧಿತ ಮಾಧುರ್ಯಭರಿತ ಹಾಡುಗಳನ್ನು ಹಾಡಿ ಮನರಂಜಿಸಿದರು. ರಸಪ್ರಶ್ನೆ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ವರದಿಗಾರ ಬಿ.ಉಮೇಶ್‌ನಾಯ್ಕ ಹಾಗೂ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿಜಯಾ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ರೇಣು, ಪದಾಧಿಕಾರಿಗಳಾದ ರಶ್ಮಿ, ಅನಿತಾ, ಜ್ಯೋತಿ, ರೂಪಾ, ಉಮಾ, ಲಕ್ಷ್ಮೀ, ಹೇಮಾ ಇತರರಿದ್ದರು.