ಗಿರಿಜಾಮ್ಮರ ಮದುವೆಯ ಸಂಪ್ರದಾಯ ನಡೆಯುತ್ತಿರುವುದು. 
ಚಿಕ್ಕಮಗಳೂರು

ಸಾಂಸ್ಕೃತಿಕ ವೈಭವದೊಂದಿಗೆ ಗಿರಿಜಾ ಕಲ್ಯಾಣೋತ್ಸವ Lord Sri Kalasheshwara

Kalasa: The 'Girija Kalyana Utsava' (divine wedding) of Sri Kalasheshwara Swamy and Girijamma was celebrated here on a grand scale, marked by Vedic rituals, religious traditions, and cultural splendor.

ಕಳಸ: ಇಲ್ಲಿನ ಶ್ರೀಕಲಶೇಶ್ವರ ಸ್ವಾಮಿ ಹಾಗೂ ಗಿರಿಜಮ್ಮರ ಗಿರಿಜಾ ಕಲ್ಯಾಣೋತ್ಸವ ವೈದಿಕ ವಿಧಿವಿಧಾನಗಳು, ಧಾರ್ಮಿಕ ಸಂಪ್ರದಾಯ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಅದ್ಧೂರಿಯಾಗಿ ನಡೆಯಿತು.

ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕಲ್ಯಾಣೋತ್ಸವ ಸಂಭ್ರಮವನ್ನು ಕಣ್ತುಂಬಿಕೊಂಡರು. ಶುಕ್ರವಾರ ಬೆಳಗ್ಗೆ ತಂತ್ರಿಗಳ ನೇತೃತ್ವದಲ್ಲಿ ಧ್ವಜಾಂಕುರ ಪೂಜೆ, ಉತ್ಸವಾಂಗ ಬಲಿ, ಪ್ರಧಾನ ಹೋಮ, ಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಮಂಗಳಾರತಿ ಸಲ್ಲಿಸಿ ದೇವರ ಆಶೀರ್ವಾದ ಪಡೆಯಲಾಯಿತು.

ಊರಿನ ಸಂಪ್ರದಾಯದಂತೆ ಭಕ್ತರಿಗೆ ಅರಿಶಿನೆಣ್ಣೆ ವಿತರಿಸುವುದು, ಛತ್ರಿ, ಛಾಮರ, ವಾದ್ಯಮೇಳದೊಂದಿಗೆ ಮನೆಮನೆಗೆ ತೆರಳಿ ಉಪಾವಂತರ ಮೂಲಕ ಅಕ್ಷತೆ ನೀಡಿ ಕಲ್ಯಾಣೋತ್ಸವಕ್ಕೆ ಆಹ್ವಾನಿಸುವ ವಿಶಿಷ್ಟ ಆಚರಣೆ ನಡೆಯಿತು. ರಾತ್ರಿ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಉಂಗುರ ಉಡಿಗೆ ಪೂಜೆ ನೆರವೇರಿದ ಬಳಿಕ ಪಲ್ಲಕ್ಕಿಯಲ್ಲಿ ಗಿರಿಜಾಮ್ಮರ ದಿಬ್ಬಣ ಆರಂಭಗೊಂಡಿತು. ದೇವಾಲಯದಿಂದ ಸರ್ವಾಂಗ ಸುಂದರಿ ಅಮ್ಮನ ದೇವಸ್ಥಾನದವರೆಗೆ ಸಾಗಿದ ದಿಬ್ಬಣವು ಧಾರ್ಮಿಕ ಶ್ರದ್ಧೆ ಹಾಗೂ ಸಾಂಪ್ರದಾಯಿಕ ವೈಭವದ ಅಪೂರ್ವ ದೃಶ್ಯಕ್ಕೆ ಸಾಕ್ಷಿಯಾಯಿತು.

ಪಂಚಪತಾಕಿ, ಕಟ್ಟಿಗೆ, ಚೌರಿ, ಇಲಾಲುಗಳು, ಗುಡಿತೋರಣ, ವಾದ್ಯಮೇಳ ಹಾಗೂ ದೀವಟಿಗೆಗಳ ಬೆಳಕಿನಲ್ಲಿ ಸಾಗಿದ ದಿಬ್ಬಣವು ಹಳೆಯ ಕಾಲದ ಮದುವೆ ಸಂಪ್ರದಾಯಗಳ ಸೊಬಗನ್ನು ಮರುಕಳಿಸಿತು. ಭಕ್ತರ ಜಯಘೋಷ, ವಾದ್ಯಗಳ ನಾದ ದಿಬ್ಬಣಕ್ಕೆ ಸಾಕ್ಷಿಯಾದವು.

ಗಿರಿಜಾಮ್ಮ ದಿಬ್ಬಣವು ದೇವಸ್ಥಾನ ತಲುಪಿದಾಗ ಸಂಪ್ರದಾಯದಂತೆ ಗಂಡಿನ ಕಡೆಯವರು ಹೆಣ್ಣಿನ ದಿಬ್ಬಣವನ್ನು ಎದುರುಗೊಳ್ಳುವ ಶಾಸ್ತ್ರ ನೆರವೇರಿತು. ಬಳಿಕ ವಿವಾಹ ಮಂಟಪದಲ್ಲಿ ತಂತ್ರಿಗಳ ನೇತೃತ್ವದಲ್ಲಿ ನಾಂದಿ, ಪುಣ್ಯಾಹ, ಭಂಡಾರ ಒಪ್ಪಿಸುವ ಶಾಸ್ತ್ರ, ಮಧುಪರ್ಕ ಪೂಜೆ, ಧ್ಯಾನವಾಹನ ಪೂಜೆ ಹಾಗೂ ಕನ್ಯಾವರಣ ಸೇರಿದಂತೆ ವಿವಿಧ ವಿವಾಹ ವಿಧಿವಿಧಾನಗಳು ನೆರವೇರಿದವು.

ಕಲ್ಯಾಣೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಭಂಡಾರ ಒಪ್ಪಿಸುವ ಶಾಸ್ತ್ರವು ವಿಶಿಷ್ಟ ಧಾರ್ಮಿಕ ವಿಧಾನದೊಂದಿಗೆ ನಡೆಯಿತು. ತಂತ್ರಿಗಳು ಒಂದರಿಂದ ಹತ್ತರವರೆಗೆ, ಬಳಿಕ ನೂರರವರೆಗೆ ಎಣಿಸಿ, ಸಾವಿರ ಗ್ರಾಮದ ಮೂರು ಪ್ರಭುಗಳ ಅರಸುಗಳ ದೇವೀ ಭಂಡಾರವನ್ನು ಒಪ್ಪಿಕೊಳ್ಳಿ ಎಂದು ಘೋಷಿಸಿದಾಗ, ಬೊಕ್ಕಸದವರು ಒಪ್ಪಿಕೊಂಡೆವು ಎಂದು ಉತ್ತರಿಸುವ ಮೂಲಕ ಶತಮಾನಗಳ ಸಂಪ್ರದಾಯವನ್ನು ಮುಂದುವರಿಸಿದರು.