ಕಡೂರು ತಾಲೂಕಿನ ಚಿಕ್ಕಬಳ್ಳೇಕೆರೆ ಗ್ರಾಮದಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು. ಪಿಎಸ್‌ಐ ಶ್ರೀಧರ್‌ನಾಯ್ಕ, ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ಸಂದೀಪ್ ಇತರರಿದ್ದರು.  
ಚಿಕ್ಕಮಗಳೂರು

ಸಭೆಯಲ್ಲೇ ನಶೆಯಲ್ಲಿ ಕಿರಿಕಿರಿ ಮಾಡಿದ ವ್ಯಸನಿಗಳು intoxicated at a public meeting

ಕಡೂರು: ಗ್ರಾಮದ ಕುಡಿಯುವ ನೀರು ಪೂರೈಕೆ ಮಾಡುವುದಕ್ಕಿಂತ ಮೊದಲು ಮನೆ ಮನೆಗಳಲ್ಲಿ ನಡೆಸುತ್ತಿರುವ ಮದ್ಯ ಮಾರಾಟದ ದಂಧೆಗೆ ಕಡಿವಾಣ ಹಾಕಿಕೊಟ್ಟರೆ ಸಾಕು ಎಂಬಂತಾಗಿದೆ. ಇಲ್ಲದಿದ್ದರೆ ಮನೆಯ ಮಕ್ಕಳು ಆಟಪಾಠ ಬಿಟ್ಟು ದೊಡ್ಡವರ ಜತೆ ಸೇರಿ ಕುಡಿತಕ್ಕೆ ದಾಸರಾಗುತ್ತಾರೆ. ಮೊದಲು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮದ್ಯ ಮಾರಾಟಮುಕ್ತ ಗ್ರಾಮವಾಗಿಸಿಕೊಡುವಂತೆ ಮಹಿಳೆಯರು ಪ್ರಜಾಸೇವಾ ಸಭೆಯಲ್ಲಿ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಚಿಕ್ಕಬಳ್ಳೇಕೆರೆ ಗ್ರಾಮದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನಾ ಸಭೆಯಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಉಮಾದೇವಿ ಮಾತನಾಡಿ, ಈ ಹಿಂದೆ ಬಹಳಷ್ಟು ಬಾರಿ 112 ಪೊಲೀಸರಿಗೆ ದೂರು ನೀಡಿದರೂ ಯಾವುದೇ ರೀತಿಯ ಸ್ಪಂದನೆ ನೀಡದೆ ಅಕ್ರಮವಾಗಿ ಮದ್ಯಮಾರಾಟ ಮಾಡುವವರ ಜತೆ ಶಾಮೀಲಾಗಿದ್ದಾರೆ. 20ಕ್ಕೂ ಹೆಚ್ಚು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಯಾವುದೇ ಬಿಗಿಯಾದ ಕ್ರಮಕೈಗೊಳ್ಳುತ್ತಿಲ್ಲ. ಗ್ರಾಮದ ಮಹಿಳೆಯರು ಸಂಜೆಯಾದರೆ ಮನೆಯಿಂದ ಹೊರಬಾರದ ಸ್ಥಿತಿಗೆ ತಲುಪುವಂತಾಗಿದೆ. ಅಬಕಾರಿ ಅಧಿಕಾರಿಗಳು ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಗ್ರಾಮದಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿರುವವ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ. ಕಳೆದ ಬಾರಿ ನಡೆದ ಜನಸ್ಪಂದನಾ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ವ್ಯಾಪಕ ದೂರುಗಳು ಬಂದರೂ ಅಧಿಕಾರಿಗಳಿಂದ ಯಾವುದೇ ಕ್ರಮವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಒಂದು ವಾರದೊಳಗಾಗಿ ಬಿಗಿಯಾದ ಕ್ರಮ ಕೈಗೊಳ್ಳಬೇಕಿದೆ. ನ್ಯಾಯಯುತ ಕರ್ತವ್ಯ ನಿಭಾಯಿಸಿ ಗ್ರಾಮದ ಹಿತಕಾಪಾಡುವುದು ಮುಖ್ಯ ಎಂದು ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಬಕಾರಿ ನಿರೀಕ್ಷಕ ಸಂದೀಪ್ ಮಾತನಾಡಿ, ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಲು ಜಾಗೃತಿ ಮೂಡಿಸುತ್ತಿದ್ದೇವೆ. ಕಳೆದ ಬಾರಿ ಎರಡು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಜತೆಗೆ ಗ್ರಾಮಸ್ಥರಿಗೆ ಇಲಾಖೆಯ ದೂರವಾಣಿ ನಂಬರ್ ದೂರು ನೀಡುವಂತೆ ಸಲಹೆ ನೀಡಲಾಗಿದೆ. ಆದರೂ ಇದುವರೆಗೂ ಫೋನ್ ಮಾಡದೆ ಸಭೆಯಲ್ಲಿ ದೂರು ವ್ಯಕ್ತಪಡಿಸುತ್ತಾರೆ. ಆದರೂ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಸಭೆ ಆರಂಭದಲ್ಲಿ ಗ್ರಾಮದ ಪಾನಮತ್ತರಾದ ಕೆಲವರು ನಶೆಯಲ್ಲಿ ವೈಯಕ್ತಿಕ ವಿಚಾರಗಳೊಂದಿಗೆ ಅನವಶ್ಯಕ ಚರ್ಚೆ ನಡೆಸಿದ ಪರಿಣಾಮ ಕೆಲಕಾಲ ಸಭೆ ಗೊಂದಲಕ್ಕೀಡಾಯಿತು. ಸಭೆಯನ್ನು ಹತೋಟಿಗೆ ತರಲು ಪೊಲೀಸರು ಹೈರಾಣಾಗುತ್ತಿದ್ದನ್ನು ಕಂಡ ಶಾಸಕ ಆನಂದ್ ಸಭೆಯ ಅವ್ಯವಸ್ಥೆಯಿಂದ ಕೂಡಿದ್ದರ ಬಗ್ಗೆ ಗರಂ ಆದರು. ಸರ್ಕಾರ ಜನಸಾಮಾನ್ಯರ ಸಮಸ್ಯೆ ಆಲಿಸುವುದಕ್ಕಾಗಿಯೇ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸುತ್ತಿದೆ. ಜನಸಾಮಾನ್ಯರ ಕಷ್ಟಗಳನ್ನು ಅರಿತು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಗ್ರಾಮದಲ್ಲಿ ರಾತ್ರಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಕಡೂರಿಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಸ್ಟಾಫ್ ನರ್ಸ್ ಒಬ್ಬರನ್ನು ನೇಮಿಸಿಕೊಡುವಂತೆ ಗ್ರಾಮಸ್ಥ ನವೀನ್ ಮನವಿ ಮಾಡಿದರು. ಈ ಭಾಗದ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ಚಿಕಿತ್ಸೆ ನೀಡಲು ದಾದಿಯರ ಹುದ್ದೆಗಳಿಗೆ ಅವಕಾಶವಿಲ್ಲ. ಆದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸಿಕೊಡಲಾಗುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎನ್.ಉಮೇಶ್ ತಿಳಿಸಿದರು. ಹುರುಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿಯಲ್ಲಿದ್ದು, ಕೂಡಲೇ ಶಾಲೆಯನ್ನು ದುರಸ್ತಿಪಡಿಸಿಕೊಡುವಂತೆ ಮುಖ್ಯಶಿಕ್ಷಕ ಮನವಿ ಮಾಡಿದರು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಮಧು ಅವರ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದ ಗ್ರಾಮಸ್ಥರು, ಬೇರೆಡೆಗೆ ನಿಯೋಜನೆ ಮಾಡದೆ ಚಿಕ್ಕಬಳ್ಳೇಕೆರೆ ಗ್ರಾಪಂನಲ್ಲೇ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವಂತೆ ಗ್ರಾಮದ ಮಹಿಳೆಯರು ಸಭೆಲ್ಲಿ ಒತ್ತಾಯಿಸಿದರು. ತಾಪಂ ಇಒ ಪ್ರವೀಣ್ ಪ್ರತಿಕ್ರಿಯಿಸಿ, ಗ್ರಾಮಸ್ಥರ ಅಪೇಕ್ಷೆಯಂತೆ ಪಿಡಿಒ ಅವರನ್ನು ಇಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಉಳಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಪಹಣಿ ತಿದ್ದಪಡಿ, ಪಿಂಚಣಿ ಸವಲತ್ತು, ಗ್ರಾಮದ ಕೆರೆಗೆ ನೀರು ತುಂಬಿಸುವ ಸೇರಿದಂತೆ 80ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂಧಿ ಕಲ್ಲೇಶ್, ಸದಸ್ಯ ಸಿ.ಎಸ್. ಸಂತೋಷ್‌ಕುಮಾರ್, ಕೆಡಿಪಿ ಸದಸ್ಯ ಅಶೋಕ್, ಗ್ರಾಪಂ ಆಡಳಿತಾಧಿಕಾರಿ ಟಿ. ಸೌಮ್ಯಾ, ಕಂದಾಯ ನಿರೀಕ್ಷಕ ಗಿರೀಶ್, ಪಿಡಿಒ ಮಧು, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.