ಬೀರೂರಿನ ಪುರಸಭೆಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ತಾಯಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಮಂಜುನಾಥ್ ಪುಷ್ಪಾರ್ಚನೆ ಮಾಡಿದರು. ಮುಬಾರಕ್, ಮೈಲಾರಪ್ಪ, ಮೇಘನಾ ಇತರರಿದ್ದರು. 
ಚಿಕ್ಕಮಗಳೂರು

ಸಂಸ್ಕೃತಿ, ಜೀವನ ಮೌಲ್ಯಗಳ ಪ್ರತೀಕ Municipality

Birur

ಬೀರೂರು: ಕನ್ನಡ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳ ಪ್ರತೀಕವಾಗಿದೆ. ಕನ್ನಡದ ಉಳಿವು ಮತ್ತು ಬೆಳವಣಿಗೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಮಂಜುನಾಥ್ ಹೇಳಿದರು.

ಪುರಸಭೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶ್ರೀಮಂತ ಸಾಹಿತ್ಯ ಪರಂಪರೆ ಹಾಗೂ ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಕನ್ನಡದ ಉಳಿವು ಮತ್ತು ಬೆಳವಣಿಗೆ ಕೇವಲ ಸರ್ಕಾರ ಅಥವಾ ಸಂಘಟನೆಗಳ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ಮಾತೃಭಾಷೆ ಮೇಲೆ ಅಭಿಮಾನ ಬೆಳೆಸಿಕೊಳ್ಳುವುದರ ಜತೆಗೆ ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡ ಮಾತನಾಡುವ ಮೂಲಕ ಭಾಷೆ ಮೇಲಿನ ಪ್ರೀತಿ ಬೆಳೆಸಬೇಕು. ಆಡಳಿತಾತ್ಮಕ ಹಾಗೂ ದೈನಂದಿನ ವ್ಯವಹಾರಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಆಶ್ರಯ ಸಮಿತಿ ಸದಸ್ಯ ಮುಬಾರಕ್ ಮಾತನಾಡಿ, ಕನ್ನಡ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಕನ್ನಡಿಗರ ಸ್ವಾಭಿಮಾನ ಮತ್ತು ಆತ್ಮಗೌರವದ ಸಂಕೇತವಾಗಿದೆ. ಅನೇಕ ಮಹನೀಯರ ತ್ಯಾಗ, ಹೋರಾಟ ಹಾಗೂ ಪರಿಶ್ರಮದ ಫಲವಾಗಿ ಕನ್ನಡ ನಾಡು ಏಕೀಕರಣಗೊಂಡು ಕರ್ನಾಟಕ ನಿರ್ಮಾಣವಾಗಿದೆ. ಪ್ರಸ್ತುತ ಇಂಗ್ಲಿಷ್ ಅವಶ್ಯಕವಾದರೂ ಮಾತೃಭಾಷೆಯನ್ನು ಮೂಲೆಗುಂಪು ಮಾಡಬಾರದು. ಕನ್ನಡದ ಇತಿಹಾಸ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.

ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಮಾತನಾಡಿ, ನಮ್ಮ ರಾಜ್ಯ ವೈವಿಧ್ಯತೆಯ ಬೀಡಾಗಿದೆ. ಸಾವಿರಾರು ಭಾಷೆಗಳು ಇದ್ದರೂ ಕನ್ನಡ ಜಗತ್ತಿನ ಮುಂದೆ ಪ್ರಾಮುಖ್ಯವನ್ನು ಉಳಿಸಿಕೊಂಡಿದೆ ಎಂದರು.

ಆಶ್ರಯ ಸಮಿತಿ ಸದಸ್ಯ ಬಿ.ಜಿ.ಮೈಲಾರಪ್ಪ, ಮೇಘನಾ, ಪುರಸಭೆ ಪರಿಸರ ಅಭಿಯಂತ ನೂರುದ್ದೀನ್, ಸಿಬ್ಬಂದಿ ಗಿರಿರಾಜ್, ಪ್ರದೀಪ್, ಸ್ವರೂಪಾ, ಶಿಲ್ಪಾ, ಇಂಜಿನಿಯರ್ ವೀಣಾ, ಪುರಸಭೆ ಮಾಜಿ ಸದಸ್ಯ ಎಸ್.ಎಸ್.ದೇವರಾಜ್, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್, ಶಿವಪ್ಪ ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು.