ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಬೈರಾಪುರ ಗ್ರಾಮದ ಜನ, ಜಾನುವಾರುಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವಂತೆ ಹಾಗೂ ಕೆರೆ ತುಂಬಿಸುವಂತೆ ಆಗ್ರಹಿಸಿ ಬೈರಾಪುರ ಗ್ರಾಮ ಜನ ಜಾನುವಾರು ಕುಡಿಯುವ ನೀರು ಹೋರಾಟ ಸಮಿತಿಯಿಂದ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಬೈರಾಪುರ ಗ್ರಾಮದಲ್ಲಿ ಭದ್ರಾ ಮುಳುಗಡೆ ಸಂತ್ರಸ್ತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ನೀರಿನ ಲಭ್ಯತೆ ಸ್ವಲ್ಪ ಸುಧಾರಿಸಿದರೂ ಬೇಸಿಗೆ ಅವಧಿಯಲ್ಲಿ ಕೊಳವೆಬಾವಿ, ಬಾವಿ ಸೇರಿದಂತೆ ನೀರಿನ ಮೂಲಗಳು ಬತ್ತಿಹೋಗುವುದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಬೈರಾಪುರ ಗ್ರಾಮ ಭದ್ರಾ ಜಲಾಶಯದ ಹಿನ್ನೀರಿನ ಸಮೀಪದಲ್ಲಿದ್ದರೂ ಸಮರ್ಪಕ, ಶಾಶ್ವತ ಕುಡಿಯುವ ನೀರಿನ ಸೌಲಭ್ಯವಿಲ್ಲವಾಗಿದೆ. ಹಾಗಾಗಿ ಭದ್ರಾವತಿ ತಾಲೂಕು ಹುಣಸೇಕಟ್ಟೆ ಗ್ರಾಮಕ್ಕೆ ಈಗಾಗಲೇ ಭದ್ರಾ ನದಿಯಿಂದ ಕೆರೆ ತುಂಬಿಸುವ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯನ್ನು ಬೈರಾಪುರ ಗ್ರಾಮದ ಕೆರೆ ತುಂಬಿಸಲು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಕುಡಿಯುವ ನೀರಿಗಾಗಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಮುತ್ತಿನಕೊಪ್ಪ ಗ್ರಾಪಂನ ಹಲವು ಹಳ್ಳಿಗಳು ಸೇರ್ಪಡೆಯಾಗಿದ್ದು, ಈ ಯೋಜನೆಗೆ ಬೈರಾಪುರ ಗ್ರಾಮವನ್ನು ಸೇರ್ಪಡೆಗೊಳಿಸಿ ನೀರು ಒದಗಿಸಬೇಕು. ಬೈರಾಪುರ ಗ್ರಾಮದ ಮಾರಿದಿಬ್ಬ ಭದ್ರಾ ನದಿ ಹಿನ್ನೀರಿನ ತಟದಲ್ಲಿದ್ದು ಮಾರಿದಿಬ್ಬಕ್ಕೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆ ನಡೆಸಲು ನೀರು ಒದಗಿಸಬೇಕು. ಆಲದಹರ, ಚೌಡಿಕಟ್ಟೆ, ಮರಾಠಿ ಕ್ಯಾಂಪ್ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬೈರಾಪುರ ಗ್ರಾಮಕ್ಕೆ ತುಂಗಾ ಅಥವಾ ಭದ್ರಾ ನದಿಯಿಂದ ಸೂಕ್ತ ಜಲಮೂಲ ಗುರುತಿಸಿ ಪಂಪ್‌ಹೌಸ್, ವಿದ್ಯುತ್ ವ್ಯವಸ್ಥೆ, ನೀರು ಶುದ್ಧೀಕರಣ ಘಟಕ ಹಾಗೂ ಮೇಲ್ದರ್ಜೆಯ ನೀರಿನ ಸಂಗ್ರಹಣಾ ಟ್ಯಾಂಕ್‌ಗಳನ್ನು ಒಳಗೊಂಡ ಶಾಶ್ವತ ಕುಡಿಯುವ ನೀರು ಯೋಜನೆ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಬೈರಾಪುರ ಗ್ರಾಮದ ನಲವತ್ತಕ್ಕೂ ಹೆಚ್ಚು ಜನರು ಇದ್ದರು.