ಮೂಡಿಗೆರೆ: ಕನ್ನಡ ಭಾಷೆಗೆ ತನ್ನದೇ ಆದ ಪಾಂಡಿತ್ಯವಿದೆ. ಸಾಹಿತ್ಯ, ಸಂಸ್ಕೃತಿ, ಪರಂಪರೆ ಮೂಲಕ ನಾಡಿನ ಉದ್ದಗಲಕ್ಕೂ ಪಸರಿಸಿರುವ ಕನ್ನಡವನ್ನು ರಾಜಗಾಂಭೀರ್ಯದಲ್ಲಿ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಕನ್ನಡಿಗರು ಹೊರಬೇಕು ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಕಾರ್ಯಕ್ರಮಗಳಲ್ಲಿ ಗಣ್ಯರು ಭಾಷಣ ಮಾಡುವುದರ ಜತೆಗೆ ಪ್ರತಿ ಶಾಲೆಯ ಓರ್ವ ವಿದ್ಯಾರ್ಥಿಗೆ ಮಾತನಾಡಲು ಅವಕಾಶ ನೀಡಬೇಕು. ಇದರಿಂದ ಇತರ ವಿದ್ಯಾರ್ಥಿಗಳಿಗೂ ಕನ್ನಡ ಭಾಷೆಯ ಮಹತ್ವ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೂಲಿ ಕೆಲಸಕ್ಕಾಗಿ ವಲಸೆ ಬಂದಿರುವ ಅಸ್ಸಾಂ ಸೇರಿದಂತೆ ವಿವಿಧ ಭಾಗದ ಕಾರ್ಮಿಕರೊಂದಿಗೆ ನಾವು ಹಿಂದಿ ಅಥವಾ ಇತರ ಭಾಷೆ ಬಳಸದೆ ಕನ್ನಡದಲ್ಲೇ ಮಾತನಾಡಬೇಕು. ಆಗ ಮಾತ್ರ ಪರಭಾಷಿಕರು ಕನ್ನಡ ಕಲಿಯಲು ಆಸಕ್ತಿ ತೋರುತ್ತಾರೆ. ಶಾಲಾ ಮಕ್ಕಳ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಅನಗತ್ಯವಾಗಿ ಆಂಗ್ಲ ಭಾಷೆ ಬಳಕೆ ಕಡಿಮೆ ಮಾಡುವ ಮೂಲಕ ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಿದಾಗ ಕನ್ನಡದ ಉಳಿವು ಸಾಧ್ಯ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಲ ಸಾಧಕರನ್ನು ಗೌರವಿಸಲಾಯಿತು. ರಾಷ್ಟ್ರಧ್ವಜಾರೋಹಣವನ್ನು ತಹಸೀಲ್ದಾರ್ ಎಸ್.ಅಶ್ವಿನಿ ನೆರವೇರಿಸಿದರು. ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಬಿ.ಶಂಕರ್, ಕೆಡಿಪಿ ಸದಸ್ಯರಾದ ಕುನ್ನಳ್ಳಿ ರವಿ, ಎಂ.ಎನ್.ಅಶ್ವತ್ಥ, ಸಂಪತ್ಕುಮಾರ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಚ್.ಮಂಜಪ್ಪ, ತಾಪಂ ಇಒ ದಯಾವತಿ, ಪೊಲೀಸ್ ವೃತ್ತ ನಿರೀಕ್ಷಕ ಕೆ.ವಿ.ರಾಜಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ, ಮುಖಂಡರಾದ ಮಂಜುನಾಥ್ ಬೆಟ್ಟಗೆರೆ, ಬಕ್ಕಿ ಪ್ರಸಾದ್, ಪುಟ್ಟಸ್ವಾಮಿ ಗೌಡ, ಬಿ.ಕೆ.ಲೋಕೇಶ್, ಯು.ಬಿ.ನಾಗೇಶ್, ನವೀನ್ ಆನೆದಿಬ್ಬ, ಸೋಮೇಶ್ ಇತರರಿದ್ದರು.