ಬೀರೂರು: ಕನಕದಾಸರ ಸಾಹಿತ್ಯದಲ್ಲಿ ಭಕ್ತಿ, ವೈಚಾರಿಕತೆ, ಮಾನವೀಯತೆ ಮತ್ತು ಸಾಮಾಜಿಕ ಕಳಕಳಿ ಹಾಸುಹೊಕ್ಕಾಗಿದೆ. ಅವರ ರಚನೆಗಳು ಸಮಾಜಕ್ಕೆ ಉತ್ತಮ ಬದುಕಿನ ಮಾರ್ಗದರ್ಶನ ನೀಡುತ್ತಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಮಂಜುನಾಥ್ ತಿಳಿಸಿದರು.
ಪುರಸಭೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕನಕದಾಸರು ಕೇವಲ ದಾಸಶ್ರೇಷ್ಠರಲ್ಲದೆ, ಸಾಮಾಜಿಕ ಪರಿವರ್ತನೆಯ ಹರಿಕಾರ. ಕೀರ್ತನೆಗಳು, ದಾಸಸಾಹಿತ್ಯ ಹಾಗೂ ತತ್ವಪದಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತಿ ವ್ಯವಸ್ಥೆ ಮತ್ತು ಮೇಲು-ಕೀಳು ಎಂಬ ಭಾವನೆಗಳನ್ನು ತೊಡೆದುಹಾಕಲು ಶ್ರಮಿಸಿದ ಮಹಾನ್ ಚೇತನ. 16ನೇ ಶತಮಾನದಲ್ಲಿ ಸರಳ ಕೀರ್ತನೆಗಳ ರಚನೆ ಮೂಲಕ ಜಾತಿ ತಾರತಮ್ಯ ಖಂಡಿಸಿದವರು. ಕಾಯಕ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದವರು ಎಂದರು.
ಪುರಸಭೆ ಆಶ್ರಯ ಸಮಿತಿ ಸದಸ್ಯ ಮುಬಾರಕ್ ಮಾತನಾಡಿ, ಯುವಜನತೆ ಕನಕದಾಸರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ, ಧರ್ಮ, ಭಾಷೆ ಎಂಬ ಭೇದಗಳನ್ನು ಬದಿಗಿಟ್ಟು ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದಿಂದ ಬದುಕಬೇಕು. ಶಿಕ್ಷಣದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಸಮಾನತೆಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಹೇಳಿದರು.
ಪುರಸಭೆ ಆಶ್ರಯ ಸಮಿತಿ ಸದಸ್ಯ ಬಿ.ಜಿ.ಮೈಲಾರಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಪುರಸಭೆ ಅಧಿಕಾರಿ ಶಿಲ್ಪಾ, ಸ್ವರೂಪಾ, ವೀಣಾ, ಸಿಬ್ಬಂದಿ ಪ್ರಸಾದ್, ಸಮಾಜದ ಮುಖಂಡ ಬಿ.ಎನ್.ವಿನಯ್, ರುದ್ರೇಶ್, ಚಲುವರಾಜ್ ಇದ್ದರು.