ಕಡೂರು: ಪಟ್ಟಣದ ಪ್ರಮುಖ ರಸ್ತೆಯ ಕೆಳಸೇತುವೆಯಲ್ಲಿ ಮೂಲಸೌಕರ್ಯಗಳ ನಿರ್ವಹಣೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಒಂದೆಡೆ ರೈಲ್ವೆ ಹಳಿಗಳ ಕೆಳಭಾಗದಲ್ಲಿ ಅಳವಡಿಸಿರುವ ಎರಡನೇ ಪ್ಲಾಟ್ಫಾರ್ಮ್ ಭಾಗದ ತಗಡಿನಶೀಟ್ಗಳು ಶಿಥಿಲಗೊಂಡು ಅಲ್ಲಲ್ಲಿ ರಂಧ್ರಗಳು ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಬ್ರಿಡ್ಜ್ ಕೆಳಭಾಗದ ರಸ್ತೆ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳು ಆತಂಕದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈಲ್ವೆ ಹಳಿಗಳ ಕೆಳಭಾಗದಲ್ಲಿ ಅಳವಡಿಸಿರುವ ತಗಡಿನ ಶೀಟ್ಗಳ ಹಲವು ಕಡೆಗಳಲ್ಲಿ ತುಕ್ಕು ಹಿಡಿದು ಹಾಳಾಗಿವೆ. ಕೆಲವು ಭಾಗಗಳಲ್ಲಿ ದೊಡ್ಡ ಪ್ರಮಾಣದ ರಂಧ್ರಗಳು ಕಾಣಿಸಿಕೊಂಡಿದ್ದು, ತಗಡುಗಳು ಸಂಪೂರ್ಣ ಶಿಥಿಲಗೊಂಡಿರುವುದು ಗೋಚರಿಸುತ್ತದೆ. ರೈಲು ಸಂಚರಿಸುವ ಸಂದರ್ಭದಲ್ಲಿ ಉಂಟಾಗುವ ಕಂಪನದಿಂದ ಮೇಲ್ಭಾಗದಲ್ಲಿರುವ ಕಸ, ಧೂಳು ಇತರ ತ್ಯಾಜ್ಯಗಳು ಕೆಳಗೆ ಬೀಳುತ್ತಿವೆ. ಇದರಿಂದ ಅಂಡರ್ ಬ್ರಿಡ್ಜ್ ಮೂಲಕ ಸಂಚರಿಸುವ ಸಾರ್ವಜನಿಕರಿಗೆ ಅಪಾಯದ ಭೀತಿ ಎದುರಾಗಿದೆ.
ರೈಲು ಹಾದುಹೋಗುವಾಗ ಉಂಟಾಗುವ ಕಂಪನದಿಂದ ತಗಡಿನ ಶೀಟ್ಗಳ ಭಾಗಗಳು ಮತ್ತಷ್ಟು ಹಾನಿಗೊಳಗಾಗುವ ಸಾಧ್ಯತೆಯಿದೆ. ಮೇಲ್ಭಾಗದಿಂದ ಬೀಳುವ ತ್ಯಾಜ್ಯಗಳು ಮಳೆ ಬಂದಾಗ ತ್ಯಾಜ್ಯದ ನೀರು ವಾಹನ ಸವಾರರ ಮೇಲೆ ಅಥವಾ ಪಾದಚಾರಿಗಳ ಮೇಲೆ ಬಿದ್ದರೆ ಗಾಯಗಳಾಗುವ ಅಪಾಯವಿದೆ. ತಗಡುಗಳ ತುಂಡುಗಳೇ ಬಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ.
ಸಾರ್ವಜನಿಕರ ಜೀವ ಸುರಕ್ಷೆ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶವಿರಬಾರದು. ಸಣ್ಣಪುಟ್ಟ ಸಮಸ್ಯೆಗಳೆಂದು ನಿರ್ಲಕ್ಷಿಸುವ ಇಂಥ ಅವ್ಯವಸ್ಥೆಗಳು ಮುಂದೊಂದು ದಿನ ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅಪಘಾತ ಸಂಭವಿಸಿದ ಬಳಿಕ ತನಿಖೆ, ಪರಿಹಾರ ಹಾಗೂ ಕ್ರಮಗಳ ಬಗ್ಗೆ ಮಾತನಾಡುವ ಬದಲು, ಅಪಾಯದ ಮುನ್ಸೂಚನೆಗಳಿರುವಾಗಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ.
ಪಟ್ಟಣದ ಅಂಡರ್ ಬ್ರಿಡ್ಜ್ನ ಅವ್ಯವಸ್ಥೆ ಕುರಿತು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ರಸ್ತೆ ನಿರ್ವಹಣಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ತಗಡಿನ ಶೀಟ್ಗಳ ದುರಸ್ತಿ ಮತ್ತು ಗುಂಡಿಮಯ ರಸ್ತೆ ಅಭಿವೃದ್ಧಿಗೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಬೇಕು.
ರೈಲ್ವೆ ಹಳಿಗಳ ಕೆಳಭಾಗದಲ್ಲಿ ಅಳವಡಿಸಿರುವ ತಗಡಿನಶೀಟ್ಗಳ ಸ್ಥಿತಿಯನ್ನು ರೈಲ್ವೆ ಇಲಾಖೆ ತಾಂತ್ರಿಕ ಅಧಿಕಾರಿಗಳು ಪರಿಶೀಲಿಸಬೇಕು. ಶಿಥಿಲಗೊಂಡಿರುವ ತಗಡುಗಳನ್ನು ಬದಲಾಯಿಸಿ, ರೈಲು ಸಂಚಾರದ ವೇಳೆ ಯಾವುದೇ ವಸ್ತುಗಳು ಕೆಳಗೆ ಬೀಳದಂತೆ ಸೂಕ್ತ ರಕ್ಷಣಾತ್ಮಕ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಿದ್ದಲ್ಲಿ ತಜ್ಞರಿಂದ ಸುರಕ್ಷತಾ ಪರಿಶೀಲನೆ ನಡೆಸಿ ಶಾಶ್ವತ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಅದೇ ರೀತಿ ಬ್ರಿಡ್ಜ್ ಕೆಳಭಾಗದ ರಸ್ತೆಯ ಗುಂಡಿಗಳನ್ನು ರಸ್ತೆ ನಿರ್ವಹಣಾ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಗುಣಮಟ್ಟದ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ರಸ್ತೆಯ ಸಮತಟ್ಟು, ನೀರು ಹರಿದುಹೋಗುವ ವ್ಯವಸ್ಥೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳಿಗೂ ಆದ್ಯತೆ ನೀಡಬೇಕಿದೆ. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಅಪಾಯದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸುವುದೂ ಅಗತ್ಯವಾಗಿದೆ.
ಕೆಳಸೇತುವೆಯ ರಸ್ತೆಯೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ರಸ್ತೆಯ ಗುಂಡಿಗಳನ್ನು ತಪ್ಪಿಸಿಕೊಂಡು ಮುಂದೆ ಸಾಗಬೇಕಾದ ಅನಿವಾರ್ಯತೆ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ತೊಂದರೆ ಉಂಟುಮಾಡುತ್ತಿದೆ. ಮುಖ್ಯವಾಗಿ ರಾತ್ರಿ ವೇಳೆ ಬೆಳಕಿನ ಕೊರತೆ ಇದ್ದಲ್ಲಿ ಗುಂಡಿಗಳು ವಾಹನ ಸವಾರರಿಗೆ ಸರಿಯಾಗಿ ಗೋಚರಿಸದೆ ಅಪಘಾತಗಳಿಗೆ ಕಾರಣವಾಗುತ್ತದೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಂತರೆ ಅವುಗಳ ಆಳ ತಿಳಿಯದೆ ವಾಹನಗಳು ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ. ಗುಂಡಿಗಳನ್ನು ತಪ್ಪಿಸಲು ವಾಹನಗಳು ಏಕಾಏಕಿ ದಿಕ್ಕು ಬದಲಿಸುವುದರಿಂದ ಎದುರುಗಡೆಯಿಂದ ಬರುವ ವಾಹನಗಳಿಗೂ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.