ಎನ್.ಆರ್.ಪುರ: ಸೀತೂರು ಗ್ರಾಪಂನ ಸೀತೂರು, ಕೆರೆಗದ್ದೆ, ಕುದುರೆಗುಂಡಿ ರಸ್ತೆಯಲ್ಲಿ ಒಂದು ಕಿ.ಮೀ.ದೂರದವರೆಗೆ ಕೆಲವು ವರ್ಷಗಳಿಂದ ಬಿದ್ದಿದ್ದ ಹೊಂಡಗಳನ್ನು ಗ್ರಾಮಸ್ಥರೇ ಸೋಮವಾರ ಮುಚ್ಚಿದರು. ಸೀತೂರಿನಲ್ಲಿ ಗ್ರಾಪಂ, ಸಹಕಾರ ಸಂಘ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಕುದುರೆಗುಂಡಿ ಭಾಗದಿಂದ ಸೀತೂರಿಗೆ ಬರಬೇಕಾದರೆ ಹಾಗೂ ಸೀತೂರು, ಕೆರೆಗದ್ದೆ ಭಾಗದ ಜನರು ಕುದುರೆಗುಂಡಿಗೆ ಹೋಗಬೇಕಾದರೆ ರಸ್ತೆಯಲ್ಲಿ ಹೊಂಡಗಳನ್ನು ತಪ್ಪಿಸಿ ಬರಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮಸ್ಥರು ಪದೇಪದೆ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಹೊಂಡಗಳನ್ನು ಮುಚ್ಚಲಿಲ್ಲ. ಹೀಗಾಗಿ ಗ್ರಾಮಸ್ಥರೇ ಗುಂಡಿಗಳನ್ನು ಮುಚ್ಚಿದರು. ಕಾರ್ಕಳದಿಂದ ಟಿಪ್ಪರ್‌ನಲ್ಲಿ ಕ್ರಷರ್ ಪುಡಿಯನ್ನು ತರಿಸಿ ಹೊಂಡಗಳಿಗೆ ಹಾಕಿ ಜೆಸಿಬಿಯಿಂದ ಸಮತಟ್ಟು ಮಾಡಿದರು. ಶ್ರಮದಾನದಲ್ಲಿ ಗ್ರಾಮಸ್ಥರಾದ ಪ್ರಖ್ಯಾತ ಶೆಟ್ಟಿ, ಪ್ರಶಾಂತ ಶೆಟ್ಟಿ, ಪ್ರವೀಣ ಶೆಟ್ಟಿ, ನಾಗೇಶ ಶೆಟ್ಟಿ, ಚೇತನ್, ಅವಿನಾಶ್, ಶಮೀಮ್ ಸೇರಿದಂತೆ 20 ಗ್ರಾಮಸ್ಥರು ಭಾಗವಹಿಸಿದ್ದರು.