ಶೃಂಗೇರಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ತಾಲೂಕಿನ ಈಡಿಗರ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ಕಲ್ಪಿತ ಯುವ ಸಂಸತ್ ಸಭೆಯಲ್ಲಿ ರಾಜ್ಯದ ವಿವಿಧ ಸಮಸ್ಯೆಗಳ ಚರ್ಚೆ ನಡೆಯಿತು.
ವಿಧಾನಸಭೆ ಕಲಾಪ ಮತ್ತು ಅಧಿವೇಶನದಲ್ಲಿ ನಡೆಯುವ ಪರ-ವಿರೋಧ ಚರ್ಚೆ, ಹಕ್ಕು ಮಂಡನೆ, ಕಾನೂನು ರೂಪಿಸುವುದು, ಶಾಸನ ರೂಪಿಸುವುದು ಕುರಿತು ಪ್ರೌಢಶಾಲೆ, ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಂದ ಚರ್ಚೆ ನಡೆಯಿತು. ಸಭಾಧ್ಯಕ್ಷರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿವಿಧ ಖಾತೆಗಳ ಸಚಿವರು, ಎಲ್ಲ ಪಕ್ಷದ ಶಾಸಕರು, ವಿಪಕ್ಷದ ನಾಯಕರು ಮತ್ತು ಅವರ ಬೆಂಬಲಿಗರಾಗಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಧಾನ ಸೌಧದಲ್ಲಿ ನಡೆಯುವ ಸಭೆಯ ಸಭಾಂಗಣದ ರೀತಿ ಸಮುದಾಯ ಭವನದಲ್ಲಿ ಕುರ್ಚಿಗಳನ್ನು ಜೋಡಿಸಲಾಗಿತ್ತು. ಸಭೆಯಲ್ಲಿ ರಾಜ್ಯದ ವಿವಿಧ ಭಾಗದ ಸಮಸ್ಯೆಗಳು, ಗ್ರಾಮೀಣ, ಪಟ್ಟಣ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು, ತೋಟಗಾರಿಕೆ, ಕೃಷಿ ಸಂಬಂಧಪಟ್ಟ ವಿಷಯಗಳು, ರೈತರ ಸಮಸ್ಯೆ, ಕಸ್ತೂರಿ ರಂಗನ್ ವರದಿ ಜಾರಿ, ಹಣಕಾಸು ವ್ಯವಹಾರ, ಆಸ್ಪತ್ರೆ, ಶಿಕ್ಷಣ, ಪಶು, ವಿದ್ಯುತ್ ಪ್ರಸರಣ ನಿಗಮ, ತಾಲೂಕು ಮತ್ತು ಜಿಲ್ಲಾಡಳಿತ, ಅಬಕಾರಿ, ಮೀನುಗಾರಿಕೆ, ಮಹಿಳಾ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ, ವನ್ಯಜೀವಿ, ಅರಣ್ಯ ಇಲಾಖೆ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಉಪ ತಹಸೀಲ್ದಾರ್ ಪ್ರವೀಣ್, ಬಿಇಒ ದತ್ತಾತ್ರೇಯ ವಿ.ಯಾಜಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಕೆ ಪಾಟೀಲ್, ವಲಯ ಅರಣ್ಯಾಧಿಕಾರಿ ರಂಗನಾಥ್, ಕೆಡಿಪಿ ಸದಸ್ಯರಾದ ಪುಟ್ಟಪ್ಪ ಹೆಗ್ಡೆ, ಅಗಸೊಳ್ಳಿ ನಾರಾಯಣ್, ವಕೀಲರ ಸಂಘದ ಅಧ್ಯಕ್ಷ ಚರಣ್, ಉಮೇಶ್ ಹೆಗ್ಡೆ ಇದ್ದರು.