ಕಡೂರು: ಪಂಚನಹಳ್ಳಿ ಎಪಿಎಂಸಿ ಯಾರ್ಡ್ನಲ್ಲಿ ಮೇವಿನ ಕೊರತೆ ಎದುರಾದ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂತೆ ಮೇವು ಬ್ಯಾಂಕ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದರು.
ಪಂಚನಹಳ್ಳಿ, ಚೌಳಹಿರಿಯೂರು ಭಾಗದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಚಟುವಟಿಕೆ ಹಾಗೂ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಧಿಕಾರಿಗಳ ತಂಡದೊಂದಿಗೆ ಬುಧವಾರ ಭೇಟಿ ನೀಡಿ ಬಳಿಕ ಮಾತನಾಡಿ, ಮುಂದಿನ ದಿನಗಳಲ್ಲಿ ಮೇವಿನ ಅಭಾವ ಉಂಟಾದರೆ ಈ ವ್ಯವಸ್ಥೆ ಮೂಲಕ ಜಾನುವಾರುಗಳಿಗೆ ಮೇವು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಚೌಳಹಿರಿಯೂರು ಭಾಗದ ಗ್ರಾಮಗಳಲ್ಲಿ ರೈತರಿಗೆ ನೀರಿನ ಲಭ್ಯತೆ, ಬೆಳೆಗಳ ಸ್ಥಿತಿಗತಿ ಮತ್ತು ಈಗಾಗಲೇ ರೈತರಿಗೆ ವಿತರಣೆ ಮಾಡಿರುವ ಮೇವಿನ ಕಿಟ್ಗಳನ್ನು ಪರಿಶೀಲನೆ ನಡೆಸಲಾಯಿತು. ನಿಡುವಳ್ಳಿ ಗ್ರಾಮದಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಕೆರೆ ನಿರ್ಮಾಣ ಕಾಮಗಾರಿಗಳ ಪ್ರಗತಿ ವೀಕ್ಷಿಸಲಾಯಿತು.
ಸಖರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಜಾನ್ ಸಾಲೆ ಎಸ್ಟೇಟ್ ಮತ್ತು ಹೊಸೂರು ಗ್ರಾಮದಲ್ಲಿ ಹಾಲಿ ಇರುವ 3 ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು ಪ್ರಸ್ತುತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮಸ್ಥರಿಗೆ ಅಗತ್ಯವಿರುವಷ್ಟು ಕುಡಿಯುವ ನೀರನ್ನು ಟ್ಯಾಂಕರ್ ಮೂಲಕವೇ ಸರಬರಾಜು ಮಾಡುವಂತೆ ಪಿಡಿಒಗೆ ಸೂಚಿಸಲಾಗಿದೆ. ಅಲ್ಲದೆ ಇಲ್ಲಿನ ಗ್ರಾಮಕ್ಕೆ ಹೊಸದಾಗಿ ಅಂಗನವಾಡಿ ಕೇಂದ್ರದ ಅವಶ್ಯಕತೆಯಿದ್ದು ಮಂಜೂರಾತಿಗಾಗಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಚೌಳಹಿರಿಯೂರು ಗ್ರಾಮದ ಕೆಪಿಎಸ್ ಶಾಲೆಗೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರು ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿ ಮಕ್ಕಳೊಂದಿಗೆ ಊಟ ಸವಿದರು. ಜಿಪಂ ಸಿಇಒ ಮೀನಾಕ್ಷಿ ಆರ್ಯ, ತಾಪಂ ಇಒ ಸಿ.ಆರ್.ಪ್ರವೀಣ್, ತಾಪಂ ಸಹಾಯಕ ನಿರ್ದೇಶಕ ಕಲ್ಲಪ್ಪ, ಪಶು ಸಹಾಯಕ ನಿರ್ದೇಶಕ ಡಾ. ಉಮೇಶ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಕೆ.ಪ್ರಕಾಶ್, ಕೃಷಿ ಸಹಾಯಕ ನಿರ್ದೇಶಕ ಲೋಕೇಶ್, ಅಭಿಯಂತ ಹರಿರಾಮ್ ಮತ್ತಿತರರಿದ್ದರು.