ಕಡೂರಲ್ಲಿ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭವನ್ನು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ರಂಭಾಪುರಿ ಪೀಠದ ಡಾ.ಶ್ರೀ ವೀರಸೋಮೇಶ್ವರ ಜಗದ್ಗುರು, ಬೆಳ್ಳಿಪ್ರಕಾಶ್, ಎಚ್.ಎಂ.ಲೋಕೇಶ್ ಮತ್ತಿತರರಿದ್ದರು. 
ಚಿಕ್ಕಮಗಳೂರು

ಮಾರ್ಚ್‌ನಲ್ಲಿ ಶ್ರೀ ರೇಣುಕಾಚಾರ್ಯರ ವಿಗ್ರಹ ಲೋಕಾರ್ಪಣೆ Rambhapuri Peetha,

Rambhapuri Peetha,

ಕಡೂರು: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನೂರಾರು ವರ್ಷಗಳ ಇತಿಹಾಸದಲ್ಲಿ ಆಗದಿರುವ ಹಲವು ಮಹತ್ವದ ಕಾರ್ಯಗಳು ಕಳೆದ 35 ವರ್ಷಗಳಲ್ಲಿ ನಡೆದಿವೆ. ಇದಕ್ಕೆ ಎಲ್ಲ ವರ್ಗದ ಭಕ್ತರ ನಿರಂತರ ಸಹಕಾರ ಹಾಗೂ ಪರಿಶ್ರಮವೇ ಕಾರಣ. ಇದೀಗ ಶ್ರೀ ರೇಣುಕಾಚಾರ್ಯರ 51 ಅಡಿ ಎತ್ತರದ ಭವ್ಯ ಮಂಗಳಮೂರ್ತಿ ವಿಗ್ರಹದ ಲೋಕಾರ್ಪಣೆಯನ್ನು ಮುಂದಿನ ಮಾರ್ಚ್‌ನಲ್ಲಿ ನೆರವೇರಿಸಲಾಗುವುದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ಶ್ರೀ ವೀರಸೋಮೇಶ್ವರ ಜಗದ್ಗುರು ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಶ್ರೀ ರೇಣುಕಾಚಾರ್ಯರ 51 ಅಡಿ ಎತ್ತರದ ವಿಗ್ರಹ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು ಈಗಾಗಲೇ ಶೇ.70ರಷ್ಟು ಕೆತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ಮಹತ್ವದ ಕಾರ್ಯಕ್ಕೆ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 5 ಕೋಟಿ ರೂ. ಅನುದಾನ ನೀಡಿದ್ದರು. ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ಭವ್ಯವಿಗ್ರಹ ಲೋಕಾರ್ಪಣೆಗೆ ಸಿದ್ಧತೆ ನಡೆಸಲಾಗಿದೆ ಎಂದರು.

ಮೈಸೂರಿನ ಮಹಾರಾಜರು ಹಿಂದೆ ರಂಭಾಪುರಿ ಪೀಠದಲ್ಲಿ ಮಠದ ಕಟ್ಟಡ ನಿರ್ಮಿಸಿಕೊಟ್ಟಿದ್ದರು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಆ ಕಟ್ಟಡ ಇದೀಗ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಮೂಲ ಪೀಠದ ಮರು ನಿರ್ಮಾಣ ಮಾಡಲಾಗುವುದು. ಈ ಯೋಜನೆಗೆ ಅಂದಾಜು 20 ಕೋಟಿ ರೂ. ವೆಚ್ಚವಾಗಲಿದೆ. ಹಳೆಯ ಕಟ್ಟಡ ತೆರವು ಕಾರ್ಯ ಕಾರ್ತಿಕ ಮಾಸದಲ್ಲಿ ಆರಂಭವಾಗಲಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 5 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಬೀರೂರು ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಕೆ.ಬಿದರೆಯ ಶ್ರೀ ಪ್ರಭುಕುಮಾರ ಶಿವಾಚಾರ್ಯರು, ಚಿಕ್ಕಮಗಳೂರಿನ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ನಂದಿಪುರದ ಶ್ರೀ ನಂದೀಶ್ವರ ಶಿವಾಚಾರ್ಯರು ಹಾಗೂ ಬೇರುಗಂಡಿಯ ಶ್ರೀ ರೇಣುಕ ಮಹಾಂತ ಶಿವಾಚಾರ್ಯರು, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಎಸ್.ವಿ.ಪಿ. ಕಂಫರ್ಟ್ಸ್ ಮಾಲೀಕ ಎಚ್.ಎಂ. ಲೋಕೇಶ್, ಶಿಕ್ಷಕ ಜಿ.ಎಂ.ಯತೀಶ್ ಇತರರಿದ್ದರು.