ಶೃಂಗೇರಿ: ನವರಾತ್ರಿ ಪ್ರಯುಕ್ತ ಮಂಗಳವಾರ ಶ್ರೀ ಶಾರದಾ ಮಠದಲ್ಲಿ ಜಗನ್ಮಾತೆ ಮಹೇಶ್ವರನ ಅರ್ಧಾಂಗಿಯಾಗಿ, ಕೈಯಲ್ಲಿ ತ್ರಿಶೂಲಧರಿಸಿ, ಚಂದ್ರರೇಖಾವಿಭೂಷಿತಳಾಗಿ, ವೃಷಭ ವಾಹನಾರೂಢಳಾಗಿ ಭಕ್ತರನ್ನು ಅನುಗ್ರಹಿಸಿದಳು. ಈಶ್ವರಗಿರಿ ಶ್ರೀ ಭವಾನಿ ಮಲಹಾನಿಕರೇಶ್ವರ ಸನ್ನಿಧಿಯಲ್ಲಿ ನವಚಂಡಿಕಾ ಹೋಮ ನಡೆಸಲಾಯಿತು.
ಮಠದಲ್ಲಿ ವೇದಗಳ ಪಾರಾಯಣ, ದೇವಿಭಾಗವತ, ಸೂತಸಂಹಿತೆ ಪಾರಾಯಣಗಳು, ಸೂರ್ಯನಮಸ್ಕಾರ, ಶ್ರೀಸೂಕ್ತ ಜಪ, ದುರ್ಗಾಜಪ ನೆರವೇರಿದವು. ಉಭಯ ಶ್ರೀಗಳು ಶ್ರೀ ಶಾರದಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಪ್ರವಚನ ಮಂದಿರದಲ್ಲಿ ಯತಿವರ್ಯರ ಸಮ್ಮುಖದಲ್ಲಿ ಶ್ರೀ ಶಾರದೆಗೆ ಡೋಲೋತ್ಸವ, ಉಯ್ಯಲೆ ಸೇವೆ ನೆರವೇರಿತು. ಬಳಿಕ ಶ್ರೀ ಚಂದ್ರಮೌಳೀಶ್ವರರಿಗೆ ವಿಶೇಷ ಪೂಜೆ ನೆರವೇರಿತು.
ಬೀದಿ ಉತ್ಸವದಲ್ಲಿ ಕುತೂಗೋಡು ಗ್ರಾಪಂ ವ್ಯಾಪ್ತಿಯ ಭಕ್ತಾದಿಗಳು, ಸಿದ್ಧಸಮಾಧಿ ಯೋಗದ ಧ್ಯಾನಿಗಳು, ಸದ್ಭಾವನಾ ಸಂಘ, ವೈಕುಂಠಪುರ ಗೆಳೆಯರ ಬಳಗ, ಗೋಚವಳ್ಳಿ ಸ್ಫೂರ್ತಿ ಯುವಕ ಸಂಘ, ತಾಲೂಕು ಒಕ್ಕಲಿಗರ ಸಂಘ, ಶಿವಳ್ಳಿ ಬ್ರಾಹ್ಮಣ ಮಹಾಸಭಾ, ವಿನಾಯಕ ಭಜನಾ ಮಂಡಳಿ, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ಯುವ ಒಕ್ಕಲಿಗರ ವೇದಿಕೆ ಮುಂತಾದ ಸಂಘ-ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಯಮುತ್ತೂರು ವಿದ್ವಾನ್ ಗೌತಮ್ ಕಣ್ಣನ್ ಭಾಗವತರ್ ಅವರಿಂದ ನಾಮಸಂಕೀರ್ತನೆ ನಡೆಯಿತು. ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ದೇವಾಲಯ ಪ್ರವೇಶಿಸಿದ ಬಳಿಕ ಬಂಗಾರರಥದಲ್ಲಿ ಶ್ರೀಶಾರದೆ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ದೇವಾಲಯದ ಒಳಪ್ರಕಾರದಲ್ಲಿ ಮೂರು ಸುತ್ತು ವೇದ, ವಾದ್ಯ ಘೋಷಗಳೊಂದಿಗೆ ರಥೋತ್ಸವ ನೆರವೇರಿತು. ಶ್ರೀಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಯತಿಗಳು ಆಸೀನರಾದ ಬಳಿಕ ಜಗನ್ಮಾತೆಗೆ ಮಹಾಮಂಗಳಾರತಿ, ಸರ್ವಸಂಗೀತ ಹಾಗೂ ವಾದ್ಯ ಸೇವೆ, ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ವಿಧಿಗಳು ನೆರವೇರಿದವು. ಅ.14ರಂದು ಜಗನ್ಮಾತೆ ಮಯೂರವಾಹನಾಲಂಕಾರದಲ್ಲಿ ಕಂಗೊಳಿಸಲಿದ್ದಾಳೆ.