ಮೂಡಿಗೆರೆಯಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಪಪಂ ಮಾಜಿ ಉಪಾಧ್ಯಕ್ಷ ಹೊಸಕೆರೆ ರಮೇಶ್ ಉದ್ಘಾಟಿಸಿದರು. ಡಿ.ಕೆ.ಲಕ್ಷ್ಮಣ್ ಗೌಡ, ಸುಂದ್ರೇಶ್ ಹೊಯ್ಸಳಲು, ಸೋಮಶೇಖರ್ ಇತರರಿದ್ದರು. 
ಚಿಕ್ಕಮಗಳೂರು

ಮಕ್ಕಳಲ್ಲಿ ಸಂಸ್ಕೃತಿ, ಪರಂಪರೆ ಅರಿವು ಮೂಡಿಸಿ Valmiki Jayanti,

Valmiki Jayanti

ಮೂಡಿಗೆರೆ: ಜಗತ್ತಿನಲ್ಲಿ ನಡೆಯುವ ಷಡ್ಯಂತ್ರಗಳನ್ನು ತೊಡೆದುಹಾಕುವ ಶಕ್ತಿ ರಾಮಾಯಣ ಗ್ರಂಥಕ್ಕಿದೆ. ಇದರಲ್ಲಿರುವ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ಕೋಳೂರು ಗ್ರಾಮದ ಮುರಾರ್ಜಿ ವಸತಿ ಶಾಲೆ ಪ್ರಾಚಾರ್ಯ ವೆಂಕಟೇಶ್ ಹೇಳಿದರು.

ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳಿಂದ ಸೋಮವಾರ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವನ ಸ್ವಾರ್ಥ ಮನೋಭಾವದಿಂದ ಸಮಾಜದ ಪ್ರಗತಿಗೆ ಹಿನ್ನಡೆಯಾಗುತ್ತಿದೆ. ಮಕ್ಕಳಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ಹಬ್ಬಗಳ ಮಹತ್ವದ ಕುರಿತು ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕೆಂದು ಹೇಳಿದರು.

ತಹಸೀಲ್ದಾರ್ ಎಸ್.ಅಶ್ವಿನಿ ಮಾತನಾಡಿ, ಮಾನವೀಯ ಮೌಲ್ಯದ ಗುಣಗಳನ್ನು ಹೊಂದಿರುವವರು ಮಾತ್ರ ಮಹನೀಯರಾಗಲು ಸಾಧ್ಯ. ರಾಮಾಯಣದ ಜೀವನ ಮೌಲ್ಯಗಳು ಹಾಗೂ ಮಹನೀಯರ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದು ತಿಳಿಸಿದರು.

ಬಾಲ್ಯವಿವಾಹ ಮುಕ್ತ ಭಾರತ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಪಪಂ ಮಾಜಿ ಉಪಾಧ್ಯಕ್ಷ ಹೊಸಕೆರೆ ರಮೇಶ್, ಕಸಾಪ ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ ಗೌಡ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು, ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ಮುಖಂಡರಾದ ಮಂಜುನಾಥ್ ಬೆಟ್ಟಗೆರೆ, ಲೋಕೇಶ್, ನವೀನ್, ಸೀತಮ್ಮ, ಅಣ್ಣೇಗೌಡ, ಚಂದ್ರೇಶ್, ಪೂರ್ಣೇಶ್, ಬಕ್ಕಿ ಮಂಜು, ಶಿಕ್ಷಕಿ ವೇದಾ ಇತರರಿದ್ದರು.