ಬೀರೂರು: ದೇವಸ್ಥಾನವೆಂದರೆ ಕೇವಲ ಪೂಜಾ ಸ್ಥಳವಲ್ಲ, ಅದು ನಮ್ಮ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಐಕ್ಯತೆಯ ಪ್ರತೀಕವಾಗಿದೆ ಎಂದು ರಂಭಾಪುರಿ ಖಾಸಾಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಡಿ.ಎಚ್.ಹಾಲಪ್ಪ ರಸ್ತೆಯ ಅಶೋಕ ಸ್ತಂಭದ ಬಳಿ ಸೋಮವಾರ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಿ ಅಮ್ಮ ದೇವಸ್ಥಾನದ ಪ್ರವೇಶದ್ವಾರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಭಕ್ತಿಯೇ ಶಕ್ತಿ, ಒಗ್ಗಟ್ಟೇ ಅಭಿವೃದ್ಧಿ, ಸ್ವಾಮಿಯ ಸೇವೆಯೇ ನಮ್ಮೆಲ್ಲರ ಸೌಭಾಗ್ಯ. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರತಿಯೊಬ್ಬ ಭಕ್ತರ ಸಹಕಾರ ಮತ್ತು ಸಮರ್ಪಣಾ ಮನೋಭಾವ ಮುಖ್ಯ ಎಂದು ತಿಳಿಸಿದರು.
ಇಂತಹ ಧಾರ್ಮಿಕ ಮತ್ತು ಅಭಿವೃದ್ಧಿ ಕಾರ್ಯಗಳು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಅಷ್ಟಲಕ್ಷ್ಮೀಯರಿಗೆ ಪೂಜೆ ಸಲ್ಲಿಸಲಾಯಿತು. ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.
ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಪುಷ್ಪಾ ಮಲ್ಲಿಕಾರ್ಜುನ್, ನವೀನ್ ಶಾಸ್ತ್ರಿ, ವೀರಭದ್ರಪ್ಪ, ಬಾಬು, ದೇವಸ್ಥಾನದ ಆಡಳಿತ ಮಂಡಳಿಯ ಮಾರ್ಗದ ಮಧು, ರವಿಕುಮಾರ್, ಶ್ರೀ ವೀರಭದ್ರೇಶ್ವರ ಯುವಕ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.